MENU

ಸೋಸಲೆ ಮಠದ ಖದೀಮರ ರಹಸ್ಯ

ಶ್ರೀಲಂಕಾಗೆ ಆರಂಭಿಕ ಆಘಾತ

December 24, 2017 ಪ್ರಚಲಿತ, ಮನರಂಜನೆ, ಯುವಜನ, ಸಂಗೀತ, ಹವ್ಯಾಸ

ರಫಿ ಜನುಮ ದಿನ: ಗೂಗಲ್ ಡೂಡಲ್ ಗೌರವ

Mohammed Rafi in Goggle doodle

ಬಾಲಿವುಡ್ ನಲ್ಲಿ “ಪ್ಲೇ ಬ್ಯಾಕ್ ರಾಜ” ಎಂದೇ ಖ್ಯಾತಿ ಪಡೆದ ಸಾಂಪ್ರದಾಯಿಕ ಹಿನ್ನೆಲೆ ಗಾಯಕ ಮಹಮದ್ ರಫಿಯವರ  ಹುಟ್ಟುಹಬ್ಬವನ್ನು ಗೂಗಲ್ ಡೂಡಲ್ ಸ್ಮರಿಸಿದೆ.

ಭಾರತೀಯ ಹಿನ್ನೆಲೆ ಗಾಯಕರಾದ ಮಹಮದ್ ರಫಿಯವರ 93 ವರ್ಷದ ಜನುಮ ದಿನಾಚರಣೆಯ ಸ್ಮರಣಾರ್ಥವಾಗಿ ಗೂಗಲ್ ಕಂಪನಿಯು ತನ್ನ ಸರ್ಚ್ ಎಂಜಿನ್ ಐಕಾನ್ ನಲ್ಲಿ ಮಹಮದ್ ರಫಿಯವರ ಪೋಟೋವನ್ನು ಹಾಕುವ ಮೂಲಕ ಅವರಿಗೆ ಗೌರವ ಸೂಚಿಸಿದೆ. ಮುಂಬೈ ಮೂಲದ ಸಚಿತ್ರಕಾರರಾದ ಸಜೀದ್ ಶೇಖ್ ರಚಿಸಿದ ಈ ಡೂಡಲ್ “ಸ್ಟುಡಿಯೋದಿಂದ ಬೆಳ್ಳಿ ಪರದೆಯವರೆಗೆ ಮತ್ತು ಅಭಿಮಾನಿಗಳ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಪ್ರಸಿದ್ಧ ಗಾಯಕ ಮಹಮದ್ ರಫಿ ಗೀತೆಗಳ ಪ್ರಯಾಣ”ವನ್ನು ತೋರಿಸುತ್ತದೆ. ಅಲ್ಲದೆ, ಮಹಮದ್ ರಫಿ ಅವರ ಸುಮಾರು 5,000 ಹಾಡುಗಳನ್ನು ತನ್ನ ಖಾತೆಯಲ್ಲಿ ಹೊಂದಿರುವ ಗೂಗಲ್ ಇಂಡಿಯಾದ ಟ್ವಿಟರ್ ಹ್ಯಾಂಡಲ್, ಅವರನ್ನು “ತಾನು ಹಾಡಿದ ಹಾಡುಗಳ ಮೂಲಕ ತನ್ನ ಪರಂಪರೆ ಬರೆದ ವ್ಯಕ್ತಿ” ಎಂದು ಬಣ್ಣಿಸಿದೆ.

mohammed rafi signature

ಮಹಮದ್ ರಫಿ

ಭಾರತೀಯ ಹಿನ್ನೆಲೆ ಗಾಯನ ಮತ್ತು ಹಿಂದಿ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಗಾಯಕರಲ್ಲಿ ಮಹಮದ್ ರಫಿ ಮೊದಲಿಗರು. ಡಿಸೆಂಬರ್ 24, 1924ರಂದು ಪಂಜಾಬಿನ ಅಮೃತಸರದಲ್ಲಿ ಜನಿಸಿದ ಮಹಮದ್ ರಫಿಯವರ ಧ್ವನಿ ಮತ್ತು ಸ್ವರ ವೈವಿಧ್ಯತೆ ಗಮನಾರ್ಹವಾಗಿತ್ತು. ಅವರು ಶಾಸ್ತ್ರೀಯ ಸಂಗೀತದಿಂದ ಮೊದಲ್ಗೊಂಡು ದೇಶಭಕ್ತಿ ಗೀತೆಗಳು, ಪ್ಯಾಥೊ, ಪ್ರಣಯದ ಹಾಡುಗಳು, ಕವ್ವಾಲಿಗಳು ಮುಂತಾದ ವೈವಿಧ್ಯಮಯ ಸಂಗೀತ ಪ್ರಕಾರಗಳ ಮೇಲೆ ಹಿಡಿತ ಸಾಧಿಸಿದ್ದರು.

ನಟನ ಪಾತ್ರಕ್ಕೆ ಅನುಗುಣವಾಗಿ ತಮ್ಮ ಗಾಯನವನ್ನು ಮಾಡಿ, ಅದು ನಟನ ತುಟಿ ಚಲನೆಗೆ ಹೊಂದಿಕೊಳ್ಳುವಂತೆ ಮಾಡುವಲ್ಲಿ ವಿಶೇಷ ಪರಿಣತಿ ಸಾಧಿಸಿದ್ದರು. ಇದಕ್ಕಾಗಿ ಅವರು ಹೆಸರುವಾಸಿಯೂ ಆಗಿದ್ದರು. ಹಿಂದಿ ಭಾಷೆಯ ಗೀತೆಗಳಿಂದಲೇ ಅವರು ಹೆಚ್ಚು ಜನಪ್ರಿಯರಾಗಿದ್ದ ಅವರು, ಕೊಂಕಣಿ, ಭೋಜಪುರಿ, ಒರಿಯಾ, ಪಂಜಾಬಿ, ಬಂಗಾಳಿ, ಮರಾಠಿ, ಸಿಂಧಿ, ಕನ್ನಡ, ಗುಜರಾತಿ, ತೆಲುಗು, ಮಗಾಹಿ, ಮೈಥಿಲಿ ಮತ್ತು ಉರ್ದು ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿದ್ದಾರೆ.

ಒಟ್ಟಾರೆಯಾಗಿ ಸುಮಾರು 26,000ಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿದ್ದ ಮಹಮದ್ ರಫಿಯವರು ಜುಲೈ 31, 1980ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, 4 ಬಾರಿ ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಅವರಿಗೆ ಸಂದಿದ್ದವು. ಆ ಮೂಲಕ ಆ ಎಲ್ಲ ಪ್ರಶಸ್ತಿಗಳೂ ತಮ್ಮನ್ನು ತಾವು ಸನ್ಮಾನಿಸಿಕೊಂಡಿದ್ದವು.

ಮಹಮದ್ ರಫಿಯವರು ಹಾಗೂ ಅವರ ಸಿರಿಕಂಠ ಘರಾನಾ, ಚೌದ್ ವಿನ್ ಕಾ ಚಾಂದ್, ಸಸುರಾಲ್, ಮೇರೆ ಮೆಹಬೂಬ್, ಪ್ರೊಫೆಸರ್, ದೋಸ್ತಿ, ಕಾಜಲ್, ಸೂರಜ್, ಬ್ರಹ್ಮಚಾರಿ, ಜಾನಿ ದುಷ್ಮನ್ ಮುಂತಾದ ಹತ್ತುಹಲವು ಚಿತ್ರಗಳಿಂದ ಚಿತ್ರರಸಿಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಕನ್ನಡದ  “ಒಂದೇ ಬಳ್ಳಿಯ ಹೂಗಳು” ಚಿತ್ರದಲ್ಲಿ ಅವರು ಹಾಡಿದ ‘ನೀನೆಲ್ಲಿ ನಡವೆ ದೂರ’ ಎಂಬ ಹಾಡು ಸಾರ್ವಕಾಲಿಕ ಶ್ರೇಷ್ಠ ಗೀತೆಯಾಗಿ ದಾಖಲಾಗಿರುವುದು ಕನ್ನಡಿಗರ ಪಾಲಿನ ಪುಣ್ಯವೇ ಸರಿ.

ಇಂತಹ ಶ್ರೇಷ್ಠ ಸಾಧಕನ ಜನುಮದಿನವನ್ನು ತನ್ನ ಗೂಗಲ್ ಡೂಡಲ್ ಆಗಿಸಿಕೊಳ್ಳುವ ಮೂಲಕ ಗೂಗಲ್ ತನ್ನನ್ನು ತಾನೇ ಅಭಿನಂದಿಸಿಕೊಂಡಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು…

Tags: , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.