MENU

ಬಚ್ಚಲು ಮಂತ್ರಿ

ಟೈಗರ್ ಈಸ್ ರೋರಿಂಗ್!

January 7, 2018 ಕಿರುತೆರೆ, ಪ್ರಚಲಿತ, ಬೆಂಗಳೂರು, ಮನರಂಜನೆ, ಯುವಜನ, ರಾಜ್ಯ, ವಿಡಿಯೋ, ಸಿನಿಮಾ, ಹವ್ಯಾಸ

ಕಾಮಿಡಿ ಕಿಲಾಡಿಯಲ್ಲೊಬ್ಬ ಮಿಮಿಕ್ರಿ ಆರ್ಟಿಸ್ಟ್…

ಸಿನಿಮಾ ರಂಗ ಪ್ರವೇಶಿಸಬೇಕೆಂದು ಹಳ್ಳಿಗಳಿಂದ ಪಟ್ಟಣಕ್ಕೆ ಲಗ್ಗೆ ಇಡುವ ಯುವ ಸಮುದಾಯವು ದಿನ ಕಳೆದಂತೆ ವಿಸ್ತಾರ ಹೊಂದುತ್ತಿದೆ. ಇನ್ನು ಕೆಲವು ಕಡೆ ಇಂತಹ ಸಮುದಾಯವು ಆಪತ್ತಿಗೆ ಸಿಲುಕಿ ನಲುಗಿದ ಉದಾಹರಣೆಗಳಿಗೂ ಲೆಕ್ಕವಿಲ್ಲ. ಹೀಗೆ ಹಳ್ಳಿಯಿಂದ ಪಟ್ಟಣಕ್ಕೆ ಬಗೆ ಬಗೆಯ ಕನಸುಗಳನ್ನು ಹೊತ್ತು ಪರದೆಯ ಮೇಲೆ ತಮ್ಮ ಪ್ರತಿಭೆಯನ್ನು ತೋರಿಸಬೇಕು, ನಮ್ಮನ್ನು ಎಲ್ಲರೂ ಗುರುತಿಸಬೇಕು, ನಮ್ಮ ಪ್ರತಿಭೆಗೆ ಸಂದ ಗೌರವದ ಚಪ್ಪಾಳೆ ಮುಗಿಲು ಮುಟ್ಟುವಂತಿರಬೇಕೆಂಬ ತೀರದ ಬಯಕೆಯಲ್ಲಿರುವ ಅನೇಕರ ಗೋಳಿನ ಕಥೆಗಳೂ ಹೇಳ ತೀರದು. ಇಂತಹ ನೋವಿಗೆ ಬನಿಯಾಗಿ, ಪ್ರತಿಭೆಗೆ ದನಿಯಾಗಿ ಯುವ ಸಮುದಾಯವನ್ನು ಆರ್ಗನೈಜ್ ಮಾಡುವ ಮೂಲಕ ಜೀ ಕನ್ನಡ ವಾಹಿನಿಯು ಈಗಾಗಲೇ ಅದ್ಬುತವಾದ ಹೆಜ್ಜೆಯನ್ನಿಟ್ಟು ಒಂದು ಹಂತವನ್ನೇ ದಾಟಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಕಾಮಿಡಿ ಕಿಲಾಡಿ ಎಂಬ ಕಾರ್ಯಕ್ರಮವು ಅಂತಹ ಅಸಾಧಾರಣ ಪ್ರತಿಭೆಗಳ ಅನಾವರಣಕ್ಕೆ ಅದ್ಬುತ ವೇದಿಕೆಯೂ ಹೌದು. ಹೀಗೆ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಂದ ನೋಡುಗರಿಗೆ ಮನರಂಜನೆ ನೀಡುವುದೇ ಈ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಆಶಯ.

ಸಮಾರಂಭವೊಂದರಲ್ಲಿ ಗೌರವ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ..ಅದರಲ್ಲೊಬ್ಬ ಮಿಮಿಕ್ರಿ ಆರ್ಟಿಸ್ಟ್

ಹೀಗೆ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ತನ್ನ ನಟನೆಯ ಚಾತುರ್ಯದಿಂದ ಅವಕಾಶ ಗಿಟ್ಟಿಸಿಕೊಂಡ ಅದ್ಬುತ ಪ್ರತಿಭೆ ಮನು. ಈತ ಹಾಸನ ಜಿಲ್ಲೆಯ ಮಡೆನೂರಿನವನು. ಸಿನಿಮಾದಲ್ಲಿ ಅದ್ಬುತ ಹೆಸರು ಮಾಡಬೇಕೆಂದು ಬದುಕು ಕೊಟ್ಟ ವ್ಯವಸಾಯವನ್ನೇ ಬದಿಗಿಟ್ಟು ಬೆಂಗಳೂರಿಗೆ ಹಾರಿದ ಈತ ಅವಕಾಶಕ್ಕಾಗಿ ತಟ್ಟದೇ ಉಳಿದ ಕದಗಳಿಲ್ಲ, ಆದ ಅವಮಾನಗಳಿಗೆ ಲೆಕ್ಕವಿಲ್ಲ, ಕಣ್ಣೀರು ಹಾಕದ ದಿನಗಳಿಲ್ಲ. ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ನಟಿಸಿದರೂ ಆ ಸಿನಿಮಾಗಳಿಗೆ ಬಿಡುಗಡೆ ಭಾಗ್ಯ ದೊರೆಯಲಿಲ್ಲ. ಬಿಡುಗಡೆಯಾದರೂ ಆತನ ಪಾತ್ರಗಳಿಗೆ ಕತ್ತರಿ ಪ್ರಯೋಗದ ‘ಭಾಗ್ಯ’ಪ್ರಾಪ್ತಿಯಾಗಿತ್ತು.

ಈತ ಪ್ರಮುಖವಾಗಿ ಚೌಕ, ಪೊರ್ಕಿ ಹುಚ್ಚ ವೆಂಕಟ್, ಅಂಬಾಸಡರ್ ಎಂಬ ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾನೆ. ಆದರೆ ಆ ಚಿತ್ರಗಳಲ್ಲೆಲ್ಲೂ ಆತನ ಪಾತ್ರದ ಕುರುಹೇ ಕಾಣಿಸುವುದಿಲ್ಲ.
ಮೂಲತಃ ಈತ ಮಿಮಿಕ್ರಿ ಕಲಾವಿದ. ಹೆಸರಾಂತ ನಟರ ಧ್ವನಿಯನ್ನು ಅನುಕರಿಸಿ ತನ್ನತ್ತ ಸೆಳೆಯಬಲ್ಲ ನಿಪುಣತೆಯನ್ನು ಹೊಂದಿರುವ ಈತನಿಗೆ ಈತನ ಧ್ವನಿಯೇ ಬಂಡವಾಳ. ಇವನ ಜೀವನ ನಿರ್ವಹಣೆಯೂ ಸಹ ಇದರಿಂದಲೇ. ಬೆಂಗಳೂರಿಗೆ ಬಂದ ಹೊಸತರಲ್ಲಿ ಆರ್ಕೇಸ್ಟ್ರಾಗಳಲ್ಲಿ ಮಿಮಿಕ್ರಿ, ನಟನೆ, ಹಾಡು, ನೃತ್ಯ ಎಂಬಿತ್ಯಾದಿ ಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ಆರ್ಕೇಸ್ಟ್ರಾ ತಾತ್ಕಾಲಿಕ ಉದ್ಯೋಗವಾದ್ದರಿಂದ ತನ್ನ ಜೀವನ ನಿರ್ವಹಣೆಗೆ ಬೇಕರಿ ಕೆಲಸ, ಸ್ಥಳೀಯ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಣೆ, ನಟನೆ ಮುಂತಾದ ಪ್ರಕಾರಗಳಲ್ಲಿಯೂ ತನ್ನ ವೃತ್ತಿ ಚಾತುರ್ಯತೆಯನ್ನು ಪ್ರದರ್ಶಿಸಿದ್ದನು.
ಮುಂದೆ ಹೋದಂತೆ ಈತ ಇತ್ತೀಚಿಗೆ ಉದಯ ಕಾಮಿಡಿಯ ಕಾರ್ಯಕ್ರಮದಲ್ಲಿ ಅವಕಾಶ ಪಡೆದುಕೊಂಡು ಅಲ್ಲಿಯೂ ಸಹ ತನ್ನ ಪ್ರತಿಭೆಯ ಅನಾವರಣಗೊಳಿಸಿದ್ದ. ಈತನ ಸಾಮರ್ಥ್ಯಕ್ಕೆ ಸರಿದೂಗುವಂತೆ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಒಬ್ಬ ಸ್ಪರ್ಧಿಯಾಗಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ನಟನೆ, ಧ್ವನಿ ಅನುಕರಣೆಯ ಆಧಾರದ ಮೇಲೆಯೇ ತನ್ನ ಜೀವನವನ್ನು ಸ್ವತಃ ತಾನೇ ರೂಪಿಸಿಕೊಳ್ಳುತ್ತಿರುವ ಮನುರವರಿಗೆ ಹೃತ್ಪೂರ್ವಕ ಅಭಿನಂದನೆಗಳು.

Tags: , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.