MENU

ದಾದಾಗಿರಿಯ ದಿನಗಳು

ದಾದಾಗಿರಿಯ ದಿನಗಳು

June 14, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

‘ಸ್ನಾನವಲ್ಲದ ಸ್ನಾನ’

ಸಾಮಾನ್ಯ ಜಗತ್ತಿನಂತೆ, ಅಧ್ಯಾತ್ಮಿಕ ಪಥದಲ್ಲೂ ‘ಸ್ನಾನ’ಕ್ಕೆ ಇನ್ನಿಲ್ಲದ ಮಹತ್ವ. ಸ್ನಾನದಿಂದಾಗುವ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ನಮ್ಮ ದೇಹದಲ್ಲಿನ ಕೊಳಕನ್ನು ಶುದ್ಧಗೊಳಿಸುವುದರ ಜೊತೆಗೆ ಅಂಗಾಂಗಗಳ ದಣಿವನ್ನು ಆರಿಸುತ್ತದೆ. ಚೈತನ್ಯವನ್ನು ವೃದ್ಧಿಸುತ್ತದೆ. ಅದರಲ್ಲೂ ತಣ್ಣೀರಿಗೆ ನೀವು ಒಗ್ಗಿದರೆ, ಅದರಿಂದ ಉಂಟಾಗುವ ಚೇತೋಹಾರಿ ಅನುಭವ, ಅದು ನೀಡುವ ಮುದ ಅದ್ಭುತ.

ನಿತ್ಯ ಸ್ನಾನ ಮಾಡುವ ಹವ್ಯಾಸಕ್ಕೆ ದೇಹ ಒಗ್ಗಿದ ನಂತರ ಯಾವ ಕಾರಣಕ್ಕಾಗಿಯಾದರೂ ಒಂದು ದಿನ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಆ ಇಡೀ ದಿನ ಒಂದು ರೀತಿಯ ಸೋಮಾರಿ ಮನಃಸ್ಥಿತಿ ಕಾಡತೊಡಗುತ್ತದೆ. ಏನನ್ನೊ ಕಳೆದುಕೊಂಡಿರುವ ವ್ಯಥೆ ಕೊರೆಯತೊಡಗುತ್ತದೆ.
ಆದರೆ ಒಂದು ಸಂಗತಿಯನ್ನು ನಾವು ಮನಸ್ಸಿಟ್ಟು ಗಮನಿಸಲು ಹೋಗುವುದಿಲ್ಲ. ಸಣ್ಣ ಮಕ್ಕಳಿಗೆ ಸ್ನಾನವೆಂದರೆ ಇನ್ನಿಲ್ಲದ ಅಲರ್ಜಿ! ಸ್ನಾನ ಮಾಡಿದ ನಂತರ ಸ್ವಲ್ಪ ಹೊತ್ತು ಅವರ ಎನರ್ಜಿ ಲೆವೆಲ್ ಕುಗ್ಗಿರುವ ಹಾಗೆ ಕಾಣುತ್ತದೆ!
ಬಹುತೇಕ ನಾವೆಲ್ಲರೂ ಕೆಳ ಮಧ್ಯಮ ವರ್ಗಗಳಿಂದ ಬಂದ (ತೀರ ಮೇಲು ವರ್ಗದಲ್ಲಿ ಜನಿಸಿದವರು ಸಾಮಾನ್ಯವಾಗಿ ಓದುವ ಹವ್ಯಾಸ ಬೆಳೆಸಿಕೊಂಡಿರುವುದಿಲ್ಲ) ನಮ್ಮಂಥವರಿಗೆ ಒಂದು ಸಂಗತಿಯ ಅರಿವಿರುತ್ತದೆ. ನಾವು ಸಣ್ಣವರಿದ್ದಾಗ ಸ್ನಾನ ಮಾಡುತ್ತಿದ್ದುದು ವಾರಕ್ಕೆ ಒಂದು ದಿನ ಮಾತ್ರ! ಅದರಲ್ಲೂ ತಲೆ-ಸ್ನಾನ ಹದಿನೈದು ದಿನಗಳಿಗೊಮ್ಮೆ! ಅದು ಬಹುತೇಕ ಕಾಲೇಜು ಮುಗಿಸುವವರೆಗೂ ಮುಂದುವರಿಯುತ್ತಿತ್ತು. ನಾನು ನಿತ್ಯ ಸ್ನಾನ ಮಾಡುವ ಹವ್ಯಾಸಕ್ಕೆ ತೆರೆದುಕೊಂಡಿದ್ದು ನನಗೆ ಇಪ್ಪತ್ತೈದು ದಾಟಿದ ನಂತರ. ಆದರೆ ನಮ್ಮ ಎನರ್ಜಿ ರಭಸ ಎಂದೂ ಕುಗ್ಗುತ್ತಿರಲಿಲ್ಲ. ಆದರೆ ನಿತ್ಯ ಸ್ನಾನ ಮಾಡತೊಡಗಿದ ನಂತರ, it became routine. ಹಲ್ಲುಜ್ಜುವ ರೀತಿ ಅದೂ ಸಹ ನಿತ್ಯದ ಅಗತ್ಯವಾಗಿ ಪರಿಣಮಿಸಿತು.
ಮೂವತ್ತು ವರ್ಷಗಳ ಹಿಂದಿನಿಂದಲೆ ದರ್ವೇಶಿಗಳ ಬಗ್ಗೆ, ಅಲೆಮಾರಿಗಳ ಬಗ್ಗೆ ಮತ್ತು ನಿತ್ಯ ಸಂಚಾರಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳತೊಡಗಿದ ನನಗೆ ಆಗಾಗ ಸ್ನಾನ ಮಾಡದಿರುವ ತುಡಿತ ಉಂಟಾಗುತ್ತದೆ. ಆ ತುಡಿತ ಬಲವಾಗತೊಡಗಿದಾಗ ನಾನು ಸ್ನಾನವನ್ನು ಬದಿಗಿರಿಸಿ ನನ್ನ ದೇಹವನ್ನು ಕಾತುರದಿಂದ ಗಮನಿಸುತ್ತಿರುತ್ತೇನೆ. ಖಂಡಿತವಾಗಿಯೂ ಸ್ನಾನ ಮಾಡದಿರುವ ಕಾರಣಕ್ಕೆ ನಮ್ಮ ದೇಹದಿಂದ ಕೆಟ್ಟ ವಾಸನೆ ಹೊರಡುವುದಿಲ್ಲ. ಅಂತಹ ವಾಸನೆ ಹೊರಡುವುದು ಕೊಳೆಯಾಗಿರುವ, ಬಹುದಿನಗಳ ಕಾಲ ಒಗೆಯದ ಗಲೀಜು ಬಟ್ಟೆಗಳನ್ನು ಧರಿಸುವುದರಿಂದ. ಬಟ್ಟೆಗೆ ಮೆತ್ತಿಕೊಳ್ಳುವ ಬೆವರು, ಕೊಳೆ ಅಲ್ಲೆ ಮಡುಗಟ್ಟಿ ಬಿಡುತ್ತದೆ. ಆದರೆ ದೇಹ ಹಾಗಲ್ಲ. ನಮ್ಮ ಬೆವರಿನಲ್ಲಿ ದುರ್ವಾಸನೆ ಉಂಟಾಗುವುದು ನಾವು ಸೇವಿಸುವ ಅನ್ನಾಹಾರಗಳಿಂದ. ವಿಪರೀತ ಸಿಹಿ, ಕರಿದ ಪದಾರ್ಥಗಳು ಮತ್ತು ಕುರುಕಲು ತಿಂಡಿಗಳಿಂದಾಗಿ ನಮ್ಮ ದೇಹ ಕೆಡುತ್ತದೆ. ಅದು ಬೆವರಿನಲ್ಲಿ ದುರ್ವಾಸನೆಯನ್ನು ಹುಟ್ಟಿಸುತ್ತದೆ. ನಾನು ನನ್ನ ‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಪುಸ್ತಕದಲ್ಲಿ ತಿರುವಣ್ಣಾಮಲೈನ ಬೆಟ್ಟದ ತುದಿಯಲ್ಲಿದ್ದ ಮಹಾನ್ ಸಾಧಕ-ಸಂತರ ಬಗ್ಗೆ ದಾಖಲಿಸಿರುವುದನ್ನು ನೀವು ಗಮನಿಸಿರಬಹುದು. ನಿತ್ಯ ಒಂದೆರಡು ಹಣ್ಣು ಮತ್ತು ಹಲವು ಬಗೆಯ ಸಣ್ಣ-ಪುಟ್ಟ ಮರಗಳ ಹಸಿ ಸೊಪ್ಪನ್ನು ಹಿಡಿಯಷ್ಟು ಮಾತ್ರ ಸೇವಿಸುತ್ತಿದ್ದ ಅವರು ಹತ್ತಾರು ವರ್ಷ ಸ್ನಾನ ಮಾಡಿರದಿದ್ದರೂ ಅವರ ಪಕ್ಕ ನಿಂತಾಗ ಪರಿಮಳದ ಕಂಪನ್ನು ಬೀರುವ ಮರದ ಪಕ್ಕ ನಿಂತಿರುವ ಅನುಭವವಾಗುತ್ತಿತ್ತು.
ಮತ್ತೊಂದು ನೆಲೆಯಿಂದ ಅವರನ್ನು ಗಮನಿಸಿದಾಗ ನನಗೆ ಹೊಳೆದಿದ್ದು; ಅವರಿದ್ದುದು ಅಕ್ಷರಶಃ ಬಂಡೆಗಳ ಮೇಲೆ; ನಡುವೆ ಅಷ್ಟಿಷ್ಟು ಮಣ್ಣಿನ ನೆಲವಿದ್ದರೂ, ಅದೂ ಸಹ ಗಟ್ಟಿಯಾಗಿತ್ತು. ಅಲ್ಲಿ ಮಳೆ ತೀರ ಕಡಿಮೆ. ಅಂದರೆ ಆ ಸಂತರು ಐದು ಪಂಚಭೂತಗಳಲ್ಲಿ ಕೇವಲ ಮೂರನ್ನು ಆಧರಿಸಿದ್ದರು: ಗಾಳಿ, ಬೆಂಕಿ ಮತ್ತು ಆಕಾಶ. ಮಣ್ಣು ಮತ್ತು ನೀರುಗಳು ತೀರ ವಿರಳ. ಅವರಿದ್ದ ಜಾಗದಿಂದ ಸಾಕಷ್ಟು ಕೆಳಗೆ ತಂಗಿದ್ದ ಅವರ ಬಹುಕಾಲದ ಶಿಷ್ಯನ ಪ್ರಕಾರ ಅವರಿಗೆ ಒಂದು ಸಾಮಾನ್ಯ ಮಡಿಕೆಯ ನೀರು ಒಂದು ವಾರದ ಕಾಲ ಸಾಕಾಗುತ್ತಿತ್ತು!
ಆದರೆ ನಾವು ಅಂತಹ ಪ್ರಯೋಗಕ್ಕೆ ಒಡ್ಡಿಕೊಂಡಾಗ, ಸೇವಿಸುವ ಆಹಾರದ ಜೊತೆಗೆ, ನಮ್ಮ ದೇಹದ ವಿಸರ್ಜನಾ ಕ್ರಿಯೆಯ ಮೇಲೆ ಇನ್ನಿಲ್ಲದ ಹಿಡಿತ ಸಾಧಿಸಿರಬೇಕಾಗುತ್ತದೆ. ಮಲಬದ್ಧತೆ ನಮ್ಮ ದೇಹಕ್ಕೆ ಉಂಟು ಮಾಡುವ ಪರಿಣಾಮ ತೀರ ಭೀಕರವಾದದ್ದು. ನಮ್ಮ ಒಳಗಿನ ಅಂಗಗಳನ್ನು ಅದು ಕೆಡಿಸುತ್ತದೆ. ಬಾಯಿ ಅಥವಾ ದೇಹದಿಂದ ಹೊರಡುವ ದುರ್ವಾಸನೆಗೆ ನಮ್ಮ ಒಳಗಿನ ಅಂಗಗಳು ಬಹುತೇಕ ಕಾರಣ. ಯಾರ ಬಾಯಿಂದಲಾದರೂ ಸಹಿಸಲಾರದ ದುರ್ವಾಸನೆ ಬರುತ್ತಿದ್ದರೆ ಅವರ ಲಿವರ್ ಕೆಟ್ಟಿದೆಯೆನ್ನುವುದರ ಸೂಚನೆ ಅದು. ಹಾಗೆಯೆ ಬೆವರಿನಿಂದ ಅಥವಾ ಪಾದಗಳಿಂದ ಅಂತಹ ದುರ್ವಾಸನೆ ಹೊರಡುತ್ತಿದ್ದರೆ ಅದು ಅವರ ಜೀರ್ಣಾಂಗಗಳು ಸಮರ್ಪಕವಾಗಿಲ್ಲದಿರುವುದನ್ನು ಸೂಚಿಸುತ್ತದೆ.
ಆದರೆ ‘ಸ್ನಾನ ಮಾಡದ ಪ್ರಯೋಗ’ ಎಸಗುವುದರಿಂದ ಏನು ಪ್ರಯೋಜನ? ಸೋಮಾರಿತನದಿಂದಾಗಿ ಸ್ನಾನ ಮಾಡದಿದ್ದಾಗ ಯಾವ ಪ್ರಯೋಜನವೂ ಇಲ್ಲ. (ಸೋಮಾರಿತನವಿರುವವರಿಗೆ ಸ್ನಾನ ಮಾಡುವುದರಿಂದಲೂ ಪ್ರಯೋಜನವಿಲ್ಲ.) ಆದರೆ ಚಟುವಟಿಕೆಯಿಂದಿದ್ದು ಸ್ನಾನವನ್ನು ಬದಿಗಿರಿಸಿದಾಗ ನಮ್ಮೊಳಗೆ ಜರುಗುವ ‘ಆಂತರಿಕ ಸಂಭಾಷಣೆ’ಗಳು ನಮ್ಮನ್ನು ಚಕಿತಗೊಳಿಸುವಷ್ಟು ‘ಗಟ್ಟಿತನ’ವನ್ನು ಪಡೆಯುತ್ತವೆ. ತೀರ ತೆಳುವಾಗಿ ನಮ್ಮೊಳಗೆ ಹರಿಯುವ ‘ಪದ’ಗಳು ಘನ ಸ್ವರೂಪಕ್ಕೆ ತಿರುಗತೊಡಗುತ್ತವೆ. ಅದಕ್ಕೆ ಕಾರಣ ಏನೆಂದು ನನಗೆ ಈ ಕ್ಷಣಕ್ಕೂ ಸ್ಪಷ್ಟವಾಗುತ್ತಿಲ್ಲ.
ಸ್ನಾನ ಮಾಡುವಾಗ ತೀರ ಎಚ್ಚರಿಕೆಯಿಂದ ಪಾಲಿಸಬೇಕಾದ ಹಲವು ಸಂಗತಿಗಳೆಂದರೆ; ವಿಸರ್ಜನಾ ಅಂಗಗಳನ್ನು ನಿತ್ಯಕ್ಕಿಂತ ಹೆಚ್ಚು ಸ್ವಚ್ಛವಾಗಿರಿಸಿಕೊಳ್ಳುವುದು. ಖಂಡಿತವಾಗಿಯೂ ಮೂಗು, ಮುಖಗಳನ್ನು ತೊಳೆದುಕೊಳ್ಳಲೇಬೇಕು; ವ್ಯಾಯಾಮದಿಂದಾಗಿ ಬೆವರುಂಟಾದಾಗ ಅದನ್ನು ಮೈಗೆ ಒರೆಸಿಕೊಂಡು ಆರಿಸುವುದು (ಬಟ್ಟೆಯಿಂದ ಒರೆಸಿದರೆ ಪ್ರಯೋಜನ ಕಡಿಮೆ); ಯಾವ ಕಾರಣಕ್ಕೂ ತಲೆಗೆ ಎಣ್ಣೆ ಹಾಕಬಾರದು. ಆದಷ್ಟೂ ಸಾಕಷ್ಟು ಅಗತ್ಯಕ್ಕಿಂತಲೂ ಹೆಚ್ಚು ನೀರು ಕುಡಿಯುವುದು. ಮತ್ತು ನಿಮಗೆ ಯಾರೂ ಬಹುಶಃ ಈ ಕ್ಷಣದವರೆಗೂ ಹೇಳಿಕೊಟ್ಟಿರದ ಒಂದು ಗೋಪ್ಯವನ್ನು ಹೇಳಿಕೊಡುತ್ತೇನೆ: ಕಡೆಯ ಪಕ್ಷ ಹತ್ತು ನಿಮಿಷಗಳ ಕಾಲ ಅಂಗೈಗಳಿಂದ ಇಡೀ ದೇಹವನ್ನು ‘ಸ್ನಾನ’ ಮಾಡಿಸುವುದು! ಅದೊಂದು ರೀತಿಯ ತೈಲರಹಿತ ಮಸಾಜ್. ಸಹಜ ನೀರಿನ ಸ್ನಾನಕ್ಕಿಂತಲೂ ಬರಿಯ ಅಂಗೈನ ಸ್ನಾನ ನೀಡುವ ಚೈತನ್ಯ ಹತ್ತಾರು ಪಟ್ಟು ಹೆಚ್ಚು. ಸಾಮಾನ್ಯ ಸ್ನಾನದಲ್ಲಿ ನಾವು ಸೋಪು ತೀಡಿದ ನಂತರ ತಲೆಯಿಂದ ಪಾದಗಳ ಕಡೆಗೆ ಚಲಿಸುತ್ತೇವೆ. ‘ಸ್ನಾನವಲ್ಲದ ಸ್ನಾನ’ದಲ್ಲಿ ಅದು ರಿವರ್ಸ್: ಪಾದಗಳಿಂದ ನೆತ್ತಿಯ ಕಡೆಗೆ. ದೇಹವನ್ನು ಒಂದು ಬೃಹತ್ ನಗರದಂತೆ ಪರಿಗಣಿಸಿ, ಎಲ್ಲಿಯೂ ಆತುರ ತೋರದೆ, ನಿಧಾನವಾಗಿ ಚಲಿಸುತ್ತಾ ಹೋಗಿ, ನಿಮ್ಮ ಕದಳಿಯವನ ನಿಮಗೇ ಅಚ್ಚರಿ ಹುಟ್ಟಿಸುತ್ತದೆ!
ಈ ಪ್ರಯೋಗವನ್ನು ನೀವು ಯಾರಿಗೂ ಹೇಳದೆ ಮಾಡತೊಡಗಿದಾಗ ಇತರರಿಗಿರಲಿ, ನಿಮ್ಮ ಪತ್ನಿಗೂ ಸಹ ನೀವು ಸ್ನಾನ ಮಾಡದಿರುವುದು ತಿಳಿಯುವುದಿಲ್ಲ! ಫಕೀರರುಗಳು ಪಾಲಿಸದ ಮತ್ತೊಂದು ನಿಯಮವನ್ನು ನಾನು ಪಾಲಿಸುತ್ತೇನೆ: ನಿತ್ಯ ಪಾದಗಳನ್ನು ತಣ್ಣನೆ ನೀರಿನಿಂದ ತೊಳೆಯುವುದು. ಏಕೆಂದರೆ, ಒಂದು ಹಂತದಲ್ಲಿ ನಾನು ಕರಾಟೆ ಕಲಿಯುವಾಗ ಪಂಚಿಂಗ್ ಬ್ಯಾಗ್‍ಗೆ ಮಿತಿ ಮೀರಿ ಕಿಕ್‍ಗಳನ್ನು ಮಾಡುತ್ತಿದ್ದುದರಿಂದ ನನ್ನ ಬೆರಳುಗಳ ಚರ್ಮ ಗಡುಸಾಗಿರುವುದು!
***
Conference of the Birds ನಮ್ಮನ್ನು ತೀವ್ರ ಆಲೋಚನೆಗೆ ಒಡ್ಡುವುದೆ ನಮ್ಮ ಆಂತರ್ಯದ ‘ಸ್ನಾನ’ದ ಬಗ್ಗೆ. ಅತ್ಥಾರ್ ಏಳು ಕಣಿವೆಗಳಲ್ಲಿ ವಿವರಗಳಿಗೆ ಹೆಚ್ಚು ಒತ್ತು ನೀಡುವುದು ದಾಹ ಮತ್ತು ಪ್ರೀತಿಯ ಕಣಿವೆಗಳಿಗೆ. ಆ ಎರಡು ಕಣಿವೆಗಳು ಅಡಿಪಾಯಗಳು. ಪಯಣಿಸಬೇಕೆನ್ನುವ ಅತೀವÀ ದಾಹ ಮತ್ತು ಎದೆಯಲ್ಲಿ ಪ್ರೀತಿಯ ಪ್ರವಾಹ ವಿಜೃಂಭಿಸುತ್ತಿರುವ ದೇಹ ಬಹುಮುಖ್ಯವೆನ್ನುತ್ತಾನೆ. ಪ್ರೀತಿಯಿಂದ ಹದಗೊಂಡ ಹೃದಯ ಮಾತ್ರವೆ ತಾಜಾ ‘ಜ್ಞಾನ’ವನ್ನು ಅರಸಲು ಸಾಧ್ಯ. ಆ ‘ಮಾರಿಫತ್’ ಕುರಿತು ಜೀವಮಾನವಿಡೀ ಓದುತ್ತಾ, ಬರೆಯುತ್ತಾ ಹೋಗಬಹುದು. ಆದರೆ ಅಂತಹ ಬೌದ್ಧಿಕ ಜ್ಞಾನ ಪ್ರಚಂಡವಾಗಿ ಮಾತನಾಡುವುದಕ್ಕೆ ಪೂರಕವಾಗಬಹುದೆ ಹೊರತು ಅನುಭಾವವಾಗುವುದಿಲ್ಲ. ನಮ್ಮ ವಚನಕಾರರ ಬಹುತೇಕ ವಚನಗಳು ಅಂತಹ ‘ಜ್ಞಾನ’ದ ಪಂಜುಗಳೆ. ಆದರೆ ಅವುಗಳನ್ನು ಓದುವ, ಅಭ್ಯಸಿಸುವ ಎಷ್ಟು ಮಂದಿ ‘ಅನುಭಾವಿ‘ಗಳಾಗಲು ಬಯಸುತ್ತಾರೆ? ಹಾತೊರೆಯುತ್ತಾರೆ? ಬಹುತೇಕರಿಗೆ ಅವು ಬೌದ್ಧಿಕ ಸಾಮಥ್ರ್ಯವನ್ನು ವೃದ್ಧಿಸುವ ಸಾಧನಗಳಾಗುತ್ತವೆ. ಅನುಭವಜನ್ಯವಾಗದ ಜ್ಞಾನ ಸಾಮಾನ್ಯ ಜ್ಞಾನ; `ಮಾರಿಫತ್’ ಅಲ್ಲ.
‘ನನ್ನೊಳಗಿನ ನಾನು’ ಏನೆನ್ನುವುದನ್ನು ಗ್ರಹಿಸುವುದು ತೀರ ಶ್ರಮದಾಯಕ ಸಾಧನೆ. ಅದೊಂದು ದೀರ್ಘ ಪಯಣ. ಆ ಪಯಣದಲ್ಲಿ ಸಾಗಲು ಸಂಕಲ್ಪ ಮಾಡಿ, ಆ ಪಥದಲ್ಲಿ ಸಂಚರಿಸಲು ತೊಡಗಿದ ನಂತರ ಅದು ಹೃದಯವನ್ನು ತಿಳಿಯಾಗಿಸುವುದರ ಮೂಲಕ ನೀಡುವ ನಿರಾಳತೆ, ಆನಂದಗಳು ಸಾಮಾನ್ಯವಲ್ಲ. ಆದರೆ ಆ ಪಯಣದಲ್ಲಿನ ಸ್ವಾರಸ್ಯಕರ ವೈಶಿಷ್ಟ್ಯತೆ ಏನು ಗೊತ್ತೆ? ನಾವು ಬಹಳಷ್ಟು ಕ್ರಮಿಸಿದ್ದೇವೆಂದು ದೃಢವಾಗಿ ನಂಬಿರುವಾಗಲೆ, ಆಗಾಗ ಒಂದು ಹೆಜ್ಜೆಯಷ್ಟನ್ನೂ ಕ್ರಮಿಸಿಲ್ಲವೆನ್ನುವ ‘ಸತ್ಯ’ದ ಅರಿವಾಗುವುದು! ಅದೊಂದು ರೀತಿಯ ‘ಹಾವು-ಏಣಿ’ ಆಟ. ಏಣಿಯನ್ನು ಹತ್ತಿ ಇನ್ನೇನು ತುದಿಯನ್ನು ತಲುಪುವಾಗ ಹಾವೊಂದು ನಮ್ಮನ್ನು ಕೆಳಕ್ಕೆ ದೂಡಿಬಿಡುತ್ತದೆ. ಕ್ರಿಯೆಯನ್ನು ಮತ್ತೆ ಮೊದಲನೆಯ ಮೆಟ್ಟಿಲಿನಿಂದ ಆರಂಭಿಸಬೇಕಾಗುತ್ತದೆ. ಮೇಲೇರುವ ಮತ್ತು ಕೆಳಕ್ಕೆ ಜಾರುವ ಆ ಪ್ರಕ್ರಿಯೆಗೆ ನಮ್ಮ ಆಂತರ್ಯವನ್ನು ಒಗ್ಗಿಸುವುದನ್ನೇ ವಚನಕಾರರು, ಸೂಫಿಗಳು, ವಜ್ರಯಾನಿಗಳು ಮುಂತಾದ ಅನುಭಾವಿಗಳು ನಮಗೆ ಹೇಳಿಕೊಡುತ್ತಿರುವುದು.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.