MENU

fake ‘ದರ್ಶನ’….

ಒಳಗೂ ಬಯಲು ಹೊರಗೂ ಬಯಲು

June 16, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಬಾಬಾ ಅಜೀಜ್

ದಾಹ, ಪ್ರೀತಿ ಮತ್ತು ದಾಹದ ಕಣಿವೆಗಳನ್ನು ದಾಟಿದ ನಂತರ ಉಳಿದ ಕಣಿವೆಗಳನ್ನು ದಾಟುವುದು ಅಷ್ಟೇನೂ ದಣಿವನ್ನುಂಟು ಮಾಡುವುದಿಲ್ಲ. ಆ ಮೂರು ಕಣಿವೆಗಳು ಸೈಮೋರ್ಗ್ ಇರುವ ಸ್ಥಳವನ್ನು ತಲುಪುವಲ್ಲಿನ ಅತೀ ದುರ್ಗಮ ಕಣಿವೆಗಳು. ದಾಹವಿಲ್ಲದಿದ್ದರೆ ಆಸಕ್ತಿ ಮೂಡುವುದಿಲ್ಲ; ಪ್ರೀತಿ ತುಂಬಿರದಿದ್ದರೆ ಹೃದಯ ಪಥಕ್ಕೆ ತೆರೆದುಕೊಳ್ಳುವುದಿಲ್ಲ; ಜ್ಞಾನ ಗಳಿಸದಿದ್ದರೆ ದಾರಿ ತಪ್ಪುವ ಸಾಧ್ಯತೆಗಳು ಹೆಜ್ಜೆ ಹೆಜ್ಜೆಗೂ ಕಂಗೆಡಿಸುತ್ತಿರುತ್ತವೆ. ನಂತರದಲ್ಲಿ ಇದಿರಾಗುವ ಕಣಿವೆಗಳಾದ ನಿರ್ಲಿಪ್ತತೆ, ವಸ್ತು ವ್ಯಾಮೋಹದಿಂದ ಬಿಡುಗಡೆ, ದೇವರನ್ನು ಕಾಣುವ ಅಚ್ಚರಿ ಮತ್ತು ಕಾತುರ ಮತ್ತು ಜೀವಂತವಾಗಿರುವಾಗಲೆ ಸಾವನ್ನು ಅಪ್ಪಿರುವುದು (fana) ಪಕ್ಷಿಗಳ ಮನಸ್ಸನ್ನು ಸೈಮೋರ್ಗ್ ಅನ್ನು ಕಾಣಲು ಅಣಿಗೊಳಿಸುತ್ತವೆ. ಹೃದಯ ಮತ್ತು ಮನಸ್ಸುಗಳು ಅಂತಿಮ ಮುಖಾಮುಖಿಗೆ ಸಿದ್ಧವಾಗುತ್ತವೆ. ಭಾವ-ಬುದ್ಧಿಗಳ ಸಮ್ಮಿಲನದ ಅವಸ್ಥೆಯಲ್ಲಿ ಪಕ್ಷಿಗಳು ಸೈಮೋರ್ಗ್ ತಲುಪುತ್ತವೆ. ಆರಂಭದಲ್ಲಿ ಸಾವಿರಾರು ಪಕ್ಷಿಗಳಿಂದ ಕೂಡಿದ್ದ ಸಮೂಹ ಸೈಮೋರ್ಗ್ ಕಾಣುವಷ್ಟರಲ್ಲಿ ಮೂವತ್ತಕ್ಕೆ ಇಳಿದಿರುತ್ತದೆ. ಇತರ ಪಕ್ಷಿಗಳು ದಾರಿಯಲ್ಲಿ ಕ್ರಮಿಸಬೇಕಿರುವ ಕಣಿವೆಗಳಲ್ಲಿ ಕಳೆದುಹೋಗಿರುತ್ತವೆ ಅಥವಾ ಅಲ್ಲೆ ನೆಲೆಯೂರಿಬಿಟ್ಟಿರುತ್ತವೆ.
ಅಂತೂ ಕಡೆಗೆ ಮೂವತ್ತು ಪಕ್ಷಿಗಳು ಸೈಮೋರ್ಗ್ ಇರುವ ಸ್ಥಳಕ್ಕೆ ತಲುಪುತ್ತವೆ. ಒಂದೇ ಸಮನೆ ನಲವತ್ತು ಹಗಲು-ರಾತ್ರಿಗಳನ್ನು ಹಾರಿ, ದಾಟಿ ಬಂದಿರುವ ಅವಕ್ಕೆ ಸೈಮೋರ್ಗ್ ವಾಸಿಸುವ ಕೊಳದ ಹತ್ತಿರ ಧಾವಿಸಿದಾಗ ಉಂಟಾಗುವ ಆನಂದ ಅಷ್ಟಿಷ್ಟಲ್ಲ. ಸೈಮೋರ್ಗ್ ಪಕ್ಷಿ ಸಮೂಹದ ಅತ್ಯುನ್ನತ ಪಕ್ಷಿ; ಪಕ್ಷಿ ಸಾಮ್ರಾಜ್ಯದ ಮಹಾನ್ ಚಕ್ರವರ್ತಿ; ಇಡೀ ವಿಶ್ವದ ಎಲ್ಲ ಅಚ್ಚರಿಗಳ ಮೊತ್ತ-ಮುಂತಾಗಿ ಕಲ್ಪಿಸಿಕೊಳ್ಳುತ್ತಾ ಕೊಳದ ಹತ್ತಿರ ಧಾವಿಸುತ್ತವೆ.
‘…ನೋಡಿ…ನೋಡಿ… ಸೈಮೋರ್ಗ್ ಅಲ್ಲಿದೆ ನೋಡಿ…’ ಎಂದು ಅವುಗಳ ಮಾರ್ಗದರ್ಶಕ, ನಾಯಕ ಹೂಪೊ ಕೊಳದ ನೀರಿನೆಡೆಗೆ ತೋರಿಸುತ್ತದೆ. ಶುಭ್ರವಾದ, ತಿಳಿಯಾದ, ಅಣುವಿನಷ್ಟೂ ಮಲಿನವಾಗದ ನೀರು.
ಪಕ್ಷಿಗಳು ಕಾತುರದಿಂದ ನೋಡುತ್ತವೆ. ಅವುಗಳಿಗೆ ಕಾಣುವುದು ಅವುಗಳ ಶುಭ್ರ ಮುಖ ಮಾತ್ರ!
‘ನೀವು ಕಾಣುತ್ತಿರುವುದೆ… ನಿಮಗೆ ಕಾಣಿಸುತ್ತಿರುವುದೆ ಸೈಮೋರ್ಗ್‍ನ ಮುಖ…’ ಎನ್ನುತ್ತದೆ ಹೂಪೊ. ಆಗ ಪಕ್ಷಿಗಳಿಗೆ ಅರಿವಾಗುತ್ತದೆ: ಸೈಮೋರ್ಗ್ ತಮ್ಮೊಳಗೆ ಹುದುಗಿರುವ ಆತ್ಮ. ಚೈತನ್ಯ, ಜೀವ. ತಾವು ಏಳು ಕಣಿವೆಗಳನ್ನು ಕ್ರಮಿಸುವ ಹಿಂದೆ ಕೇವಲ ಪ್ರಾಣಿ-ಪಕ್ಷಿಗಳಾಗಿದ್ದೆವು; ಕ್ರಮಿಸಿದ ನಂತರ ಪ್ರಾಣಿಗಳ ಆಂತರ್ಯದಲ್ಲಿರುವ ‘ಆತ್ಮ’ದ ದರ್ಶನ ತಮಗಾಗುತ್ತಿದೆ.
ಅಲ್ಲಮ ಹೇಳುವ ಹಾಗೆ ದೇಹ ಮತ್ತು ಜೀವದ ನಡುವಿನ ಹೋಲಿಕೆಯನ್ನು ಪಕ್ಷಿಗಳು ಬಿಟ್ಟಿವೆ. ಹಿಂದೆ ತಮಗೆ ಕಾಣುತ್ತಿದ್ದ ಮುಖದಲ್ಲಿ ಸ್ವಾರ್ಥ, ವಂಚನೆ, ದಡ್ಡತನ, ಮೌಢ್ಯ, ಸಣ್ಣತನ, ಸಿಟ್ಟು, ದ್ವೇಷ-ಎಲ್ಲವೂ ತುಂಬಿರುತ್ತಿದ್ದವು. ಆದರೆ ಕೊಳದ ನೀರಿನಲ್ಲಿ ಕಾಣುತ್ತಿರುವ ಮುಖಗಳಲ್ಲಿ ಅವುಗಳು ಎಳ್ಳಷ್ಟೂ ಇಲ್ಲ. ನಲವತ್ತು ದಿನಗಳ ಅವಧಿಯಲ್ಲಿ ತಾವು ತಮ್ಮ ‘ಜೀವ’ವನ್ನು ಸುತ್ತುವರೆದಿದ್ದ, ಕಂಗೆಡಿಸಿದ್ದ, ಹಿಡಿತದಲ್ಲಿಟ್ಟುಕೊಂಡಿದ್ದ ವಿಕಾರಗಳಿಂದ ಕಳಚಿಕೊಂಡಿರುವ ಅನುಭವವಾಗುತ್ತದೆ. ಇನ್ನು ಮತ್ತೆ ತಾವು ತಮ್ಮ ಸ್ವಸ್ಥಳಗಳಿಗೆ ಹಿಂದಿರುಗಿದರೂ, ತಮ್ಮನ್ನು ಆ ವಿಕಾರಗಳು ಮುತ್ತುವುದಿಲ್ಲ. ಪಕ್ಷಿಯೆಂದರೆ ನನ್ನೊಳಗಿನ ಆತ್ಮದ ಸಂಕೇತ. ಹಾವು, ಹಲ್ಲಿ, ಗಿಣಿ, ನಾಯಿ, ಹದ್ದು, ಗೂಬೆ-ಮುಂತಾದ ಗುಣಾತ್ಮಕ ‘ಪ್ರಾಣಿ’ ಗುಣದಲ್ಲಿ ನಿಜವಾದ ಪಕ್ಷಿ ಮರೆಯಾಗಿರುತ್ತದೆ. ನಮ್ಮ ಪಯಣದ ಉದ್ದೇಶ ಸರಳ; ನಮ್ಮನ್ನು ನಾವು ‘ಕೊಳೆ’ಗಳಿಂದ ಕಳಚಿಕೊಳ್ಳುವುದು.
***
The conference of the Birdsನ ರೀತಿಯಲ್ಲಿಯೆ ಸೂಫಿ ಪಯಣವನ್ನು ನಮ್ಮೆದುರಿಗೆ ಎಳೆಎಳೆಯಾಗಿ ತೆರೆದಿಡುವ ಒಂದು ಸಿನಿಮಾ ಇದೆ. ಬಾಬಾ ಅಜೀಜ್. Baba Aziz. ನೀವು onlineನಲ್ಲಿ ಆ ಸಿನಿಮಾ ನೋಡಬಹುದು. ಅದೊಂದು ಸೂಫಿ ದೃಶ್ಯ ಕಾವ್ಯ. ಇರಾನಿ ಭಾಷೆಯ ಈ ಸಿನಿಮಾದ ಸಂಭಾಷಣೆಗಳು ಇಂಗ್ಲಿಷ್ sub titleನಲ್ಲಿ ನಮ್ಮ ಮನಸ್ಸುಗಳನ್ನು ಅರಳಿಸುತ್ತವೆ. ಕಣ್ಣು ಕಾಣದ ವಯಸ್ಸಾದ ಅಜ್ಜ ಅಜೀಜ್ ತನ್ನ ಮೊಮ್ಮಗಳ ಜೊತೆ ಸೂಫಿಗಳ ಸಭೆಗೆ ಹೋಗುವುದು ಅದರ ವಸ್ತು. ಅಜೀಜ್ ಪಕ್ಷಿ ಹೂಪೊ ರೀತಿ ಗೋಚರಿಸಿದರೆ, ಮೊಮ್ಮಗಳು ಹೂಪೊ ಪ್ರಶ್ನಿಸುವ ಇತರ ಪಕ್ಷಿಗಳ ಸಂಕೇತದಂತೆ ಕಾಣುತ್ತಾಳೆ. The conference of the Birdsನಂತೆ ಈ ಸಿನಿಮಾದಲ್ಲಿಯೂ ಸಾಕಷ್ಟು ಉಪಕಥೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಭವ್ಯವಾಗಿ ನಮ್ಮೆದುರಿಗೆ ತೆರೆದುಕೊಳ್ಳುತ್ತಾ ಹೋಗುವ ಮರುಭೂಮಿ ನಮ್ಮ ಬದುಕಿಗೆ ಕನ್ನಡಿ ಹಿಡಿಯುತ್ತದೆ.
ಅಜ್ಜ-ಮೊಮ್ಮಗಳು ಸಾಗುತ್ತಿದ್ದಾರೆ. ಹನ್ನೆರಡು ವರ್ಷದ ಮೊಮ್ಮಗಳು ಸಹಜವಾಗಿಯೆ ‘…ಇನ್ನೂ ಎಷ್ಟು ದೂರ…?’ ಎಂದು ಕೇಳಿದಾಗ ಅಜ್ಜ ತನಗೆ ಗೊತ್ತಿಲ್ಲವೆನ್ನುತ್ತಾನೆ. ಹಾಗಾದರೆ ಅಲ್ಲಿಗೆ ತಲುಪುವುದು ಹೇಗೆಂದು ಮೊಮ್ಮಗಳು ಕೇಳಿದಾಗ, ‘…ಹೃದಯದಲ್ಲಿ ನಂಬಿಕೆ ಇದ್ದರೆ ಖಂಡಿತವಾಗಿಯೂ ತಲುಪುತ್ತೇವೆ…’ ಎನ್ನುತ್ತಾನೆ ತಾತ. ಮೊಮ್ಮಗಳಿಗೆ ‘ದಾರಿ ತಪ್ಪಿದರೆ…?’ ಎನ್ನುವ ಆತಂಕ. ತಾತ ದಾರಿಯೆಂದೂ ತಪ್ಪುವುದಿಲ್ಲ, ಹುಡುಕಾಡುವಾಗ ಅಲ್ಲಲ್ಲಿ ಜಾಡು ಸರಿದರೂ ಮತ್ತೆ ಸರಿ ದಾರಿಯಲ್ಲಿ ಇರುತ್ತೇವೆಂದು ಹೇಳುತ್ತಾನೆ. ಅವರಂತೆಯೆ ಹುಡುಕಾಟದಲ್ಲಿರುವ ಸಾಕಷ್ಟು ಜನ ಅವರಿಗೆ ಇದಿರಾಗತೊಡಗುತ್ತಾರೆ. ಅವರೊಡನೆ ಮಾತನಾಡುತ್ತಾ, ಊಟ ಮಾಡುತ್ತಾ, ತಿರುಗಣಿ ನೃತ್ಯ ಮಾಡುತ್ತಾ ಸಾಗುತ್ತಾರೆ ತಾತ-ಮೊಮ್ಮಗಳು. ಮಧ್ಯದಲ್ಲಿ ಮೊಮ್ಮಗಳು ಕಳೆದುಹೋಗುತ್ತಾಳೆ. ಆಗ ಇತರ ಯಾರೋ ಅವಳನ್ನು ಹುಡುಕಿಕೊಡುತ್ತಾರೆ. ಅವಳಿಗೆ ಜ್ವರ ಬರುತ್ತದೆ. ತಾತನೊಡನೆ ಮತ್ತೊಬ್ಬ ಯುವಕ ಸೇರಿ ಅವಳಿಗೆ ಆರೈಕೆ ಮಾಡುತ್ತಾರೆ. ಅವಳಿಗೆ ಆರೈಕೆ ಮಾಡುವ ಯುವಕ ಒಬ್ಬ ಕವಿ. ಅವನ ಗೆಳತಿ ‘ನೂರ್’ ಒಂದು ದಿನ ಇದ್ದಕ್ಕಿದ್ದ ಹಾಗೆ ಕಾಣೆಯಾಗುತ್ತಾಳೆ. ಅವಳು ಸೂಫಿಗಳ ಸಭೆಯಲ್ಲಿ ಸಿಗಬಹುದೆಂದು ಎಣಿಸುತ್ತಾ ಸಾಗುತ್ತಿದ್ದಾನೆ. ಅವರ ರೀತಿಯೆ ಹಲವಾರು ಗಂಡಸರು-ಹೆಂಗಸರೂ ಸಹ ಸಾಗುತ್ತಿರುತ್ತಾರೆ. ಆಜೂಬಾಜಿನಲ್ಲಿ ಯಾರೂ ಇರದೆ ತಾವಿಬ್ಬರೆ ಸಾಗುತ್ತಿದ್ದಾಗ ತಾತ ಮೊಮ್ಮಗಳಿಗೆ ತನ್ನ ಸಂಸ್ಥಾನ, ವೈಭೋಗ ಎಲ್ಲವನ್ನೂ ತೊರೆದು ‘ಸತ್ಯ’ವನ್ನು ಅಂದರೆ ‘ಬೆಳಕ’ನ್ನು ಅರಸಿ ಹೊರಟಿರುವ ರಾಜಕುಮಾರನ ಕಥೆಯನ್ನು ಹೇಳುತ್ತಿದ್ದಂತೆ (ಬುದ್ಧ?) ಆ ಕಥೆಯೂ ವಿಷ್ಯುಯಲ್‍ಗಳ ಮೂಲಕ ನಮ್ಮನ್ನು ಸೆಳೆಯತೊಡಗುತ್ತದೆ.
ಕಡೆಗೆ ಎಲ್ಲ ದರ್ವೇಶಿಗಳು ನೆರೆದಿರುವ ಒಂದು ಸಭೆಯ ನಂತರ ತಾತ ಸಾಯಲು ತೀರ್ಮಾನಿಸುತ್ತಾನೆ. ದುಃಖಿಸುವ ಮೊಮ್ಮಗಳನ್ನು ಸಮಾಧಾನಿಸಿ, ‘ನೂರ್’ಳನ್ನು ಹುಡುಕುತ್ತಿರುವ ಯುವಕನ ಕೈಗೆ ಅವಳನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ನೀಡಿ ಕಳಿಸುತ್ತಾನೆ.
ಅವನು ಸಾವಿಗೆ ಸಿದ್ಧತೆ ಮಾಡಿಕೊಳ್ಳುವಾಗ, ಅದೇ ದಾರಿಯಲ್ಲಿದ್ದ ಯುವಕನೊಬ್ಬನನ್ನು ಕರೆದು ತಾನು ಸತ್ತ ನಂತರ ತನ್ನ ದೇಹವನ್ನು ಮರಳಿನÀಲ್ಲಿ ಹೂಳಲು ಕೋರಿಕೊಳ್ಳುತ್ತಾನೆ. ಆ ತಾತನ ಬಗ್ಗೆ ಸಾಕಷ್ಟು ಆದರವನ್ನು ಬೆಳೆಸಿಕೊಂಡಿದ್ದ ಆ ಯುವಕ ಆತನನ್ನು ಸಾಯದಿರಲು ಬೇಡಿಕೊಳ್ಳುತ್ತಾನೆ.
‘…ನನ್ನ ವಿವಾಹದ ದಿನ ನೀನೇಕೆ ಇಷ್ಟು ದುಃಖದಿಂದಿದ್ದೀಯಾ…?’ ಎಂದು ಪ್ರಶ್ನಿಸುತ್ತಾನೆ ತಾತ ಬಾಬಾ ಅಜೀಜ್.
ಯುವಕ ಅಚ್ಚರಿಯಿಂದ ‘…ಏನು ಹೇಳುತ್ತಿರುವೆ ಬಾಬಾ ನೀನು… ಸಾಯುತ್ತೇನೆ ಎನ್ನುತ್ತೀಯಾ… ವಿವಾಹ ಎನ್ನುತ್ತೀಯಾ… ನನಗೆ ಏನೂ ಗೊತ್ತಾಗುತ್ತಿಲ್ಲ…’ ಎನ್ನುತ್ತಾನೆ.
ಬಾಬಾ ಅಜೀಜ್ ಹೇಳುತ್ತಾನೆ: ‘… ಹೌದು ಸಾವೆಂದರೆ ವಿವಾಹ… ನನ್ನ ಜೀವ ಅನಂತತೆಯೊಡನೆ ಬೆರೆಯುವ ವಿವಾಹ’ ಎನ್ನುತ್ತಾನೆ. ಅಚ್ಚರಿಗೊಳ್ಳುವ ಯುವಕ ಬಾಬಾ ಅಜೀಜ್ ಕೋರಿಕೆಯನ್ನು ಈಡೇರಿಸುತ್ತಾನೆ.
ನಂತರದಲ್ಲಿ ಮೊಮ್ಮಗಳು ಆ ಯುವಕನ ಜೊತೆಗೂಡಿ ‘ನೂರ್’ಳ ಹುಡುಕಾಟದಲ್ಲಿ ಸಹಕರಿಸತೊಡಗುತ್ತಾಳೆ. ದೊಡ್ಡ ದೊಡ್ಡ ಕೋಣೆಗಳಲ್ಲಿ ಹಲವಾರು ಗುಂಪುಗಳು ಸೇರಿ ಸೂಫಿ ಗೀತೆಗಳನ್ನು ಹಾಡುತ್ತಿರುತ್ತಾರೆ. ಅಲ್ಲಿ ಹುಡುಗಿಯ ಕಣ್ಣಿಗೆ ಎಲ್ಲರೂ ‘ನೂರ್’ಗಳಂತೆಯೆ ಕಾಣುತ್ತಿರುತ್ತಾರೆ. ಹಾಗಾಗಿ ಅವಳು ಇದಿರಾಗುವ ಎಲ್ಲ ಯುವತಿಯರ ಎದುರಿಗೂ ‘ನೂರ್’ ‘ನೂರ್’ ಎಂದು ಕರೆಯುತ್ತಿರುತ್ತಾಳೆ. ಕೊನೆಯಲ್ಲಿ ಇಬ್ಬರು ಯುವತಿಯರ ನಡುವೆ ಕುಳಿತು ಸೂಫಿ ಹಾಡನ್ನು ಹೇಳುತ್ತಿದ್ದ ‘ನೂರ್’ ಕಾಣಿಸುತ್ತಾಳೆ. ಅಂದ ಹಾಗೆ ‘ನೂರ್’ ಎಂದರೆ ‘ಬೆಳಕು’, ‘ಪ್ರಕಾಶ’ ಎಂದರ್ಥ.
***
ನಾನು ಕಳೆದ ಒಂದು ವರ್ಷದಿಂದ ಗೊಂದಲವಾದಾಗಲೆಲ್ಲ ‘ಬಾಬಾ ಅಜೀಜ್’ ನೋಡುತ್ತಿರುತ್ತೇನೆ.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.