MENU

ಒಳಗೂ ಬಯಲು ಹೊರಗೂ ಬಯಲು

ಒಳಗೂ ಬಯಲು ಹೊರಗೂ ಬಯಲು

June 18, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಕಾಡುವ ‘ದೆವ್ವ’ಗಳು – 1

ನ್ನೊಂದು-ಹನ್ನೆರಡನೆಯ ಶತಮಾನಗಳು ಅಕ್ಷರಶಃ ‘ಜೀವ’ದ ಹುಡುಕಾಟದ ಶತಮಾನಗಳು. ‘ಜೀವ’ ಎನ್ನುವುದನ್ನು ನಾವು ಹೇಗೆ ಬೇಕಾದರೂ ಪರಿಗಣಿಸಬಹುದು. ಆತ್ಮ, ಅನಾತ್ಮ, ಚೈತನ್ಯ, soul ಎಂದರೆ ‘ಜೀವ’ಗಳೆ. ಕಾಯದೊಡನೆ ಹೊಲಿಗೆಯಿಂದ ಸಂಬಂಧ ಇಟ್ಟುಕೊಂಡಿರುವ ಯಾವ ಸಾಧನಗಳ ಹಿಡಿತಕ್ಕೂ ಸಿಗದ ದ್ರವ್ಯ.
ಮೋಸೆಸ್, ಬುದ್ಧರುಗಳ ಕಾಲದಲ್ಲೆ ‘ಜೀವ’ದ ಗೋಪ್ಯವನ್ನರಿಯುವ ಕುತೂಹಲ ಎಲ್ಲೆಡೆ ತೀವ್ರವಾಗಿ ಹರಡಿತ್ತು. ಭಾಷೆಯ ಮೇಲೆ ಹಿಡಿತ ಸಾಧಿಸಿದ ದಿನದಿಂದಲೆ ಮನುಷ್ಯ ಎಲ್ಲ ಬಗೆಯ ಗೋಪ್ಯಗಳ ಅನ್ವೇಷಣೆಯ ಕಡೆಗೆ ಪಯಣಿಸತೊಡಗಿದ. ಭಾಷೆಯ ಮೇಲೆ ಮನುಷ್ಯ ಹಿಡಿತ ಸಾಧಿಸಿದ್ದಾನೊ ಅಥವಾ ಭಾಷೆಯೆ ಮನುಷ್ಯನ ಮೇಲೆ ಹಿಡಿತ ಸಾಧಿಸಿದೆಯೊ ಎನ್ನುವುದು ಈ ಕ್ಷಣಕ್ಕೂ ಒಗಟಾಗಿದೆ. ಆದರೆ ಒಂದಂತೂ ಸತ್ಯ: ಕಾಣುವ, ಕಾಣದ ಎಲ್ಲ ವಿಶ್ವಗಳ ರಹಸ್ಯ ಅಕ್ಷರಗಳಲ್ಲಿ ಅಡಗಿದೆ. ನಮ್ಮ ಭಾಷೆಗಳ ಐವತ್ತೆರಡು ಅಕ್ಷರಗಳ ನಡುವೆ ಸತ್ಯ ಅಡಗಿದೆ. ಕಡಿಮೆ ಅಕ್ಷರಗಳಿರುವ ಇಂಗ್ಲಿಷ್‍ನಂತಹ ಭಾಷೆಗಳೂ ಸಹ ನಮ್ಮಷ್ಟೆ ಬಲಿಷ್ಠ, ಅರ್ಥಪೂರ್ಣ. ಹಾಗೆಯೆ ಚಿತ್ರಗಳನ್ನು ಅಕ್ಷರಗಳಂತೆ ಬಳಸುವ ಚೀನಿ ಅಥವಾ ಪ್ರಾಚೀನ ಈಜಿಪ್ಷಿಯನ್ ಭಾಷೆಗಳೂ ಸಹ ಇತರ ಭಾಷೆಗಳ ಹಾದಿಯಲ್ಲೆ ಇವೆ. ಅವಿರಲಿ, ಅಕ್ಷರ ಮೂಲದಿಂದಲೆ ಜನಿಸಿರುವ ಸಂಖ್ಯೆಗಳೂ ಸಹ ವಿಶ್ವವನ್ನು ಗ್ರಹಿಸುವಲ್ಲಿ ಅಪಾರ ಕೊಡುಗೆಯನ್ನು ನೀಡಿವೆ.


ಮೊನ್ನೆ ರಾತ್ರಿ ಕವಯತ್ರಿ ಪ್ರತಿಭಾರವರೊಡನೆ ‘ಭಾಷೆ’ಯೆನ್ನುವ ಅದ್ಭುತದ ಬಗ್ಗೆ, mystery ಬಗ್ಗೆ, ಮಾತನಾಡುತ್ತಿದ್ದಾಗ ಅವರು ಋಗ್ವೇದದಲ್ಲಿ ಬರುವ ‘ವಾಕ್-ಸೂಕ್ತ’ವನ್ನು ಪ್ರಸ್ತಾಪಿಸಿದರು. ಸಾಮಾನ್ಯವಾಗಿ ವೇದದಲ್ಲಿರುವ ಪುರುಷ ದೇವರುಗಳ ನಡುವೆ ‘ವಾಕ್’ ಅದು ತಾಜಾ ಹೆಣ್ಣು. ಋಗ್ವೇದಗಳ ಬಗ್ಗೆ ನಮ್ಮ ತಕರಾರುಗಳು ಸಾಕಷ್ಟಿದ್ದರೂ ಕೂಡ ಅದರಲ್ಲಿ ಬರುವ ಬೆಳಕು ಮತ್ತು ಭಾಷೆಯ ವರ್ಣನೆ ನಮ್ಮನ್ನು ಅಪಾರವಾಗಿ ಸೆಳೆಯುತ್ತದೆ. ಬೆಳಕಿನ ಕಿರಣಗಳನ್ನು ಅಲ್ಲಿ ‘ಉಷೆ’ ಎಂದು ಗುರುತಿಸಿ, ‘ವಾಕ್’ ಅನ್ನು ‘ಅಂಬ್ರಣಿ’ ದ್ರಷ್ಟಾರೆಯನ್ನಾಗಿ ಪರಿಗಣಿಸಲಾಗಿದೆ.
ಸದ್ಯಕ್ಕೆ ಉಷೆಯನ್ನು ಬದಿಗಿಟ್ಟು ‘ವಾಕ್’ಳನ್ನು ನೋಡುವ. ಸಂಸ್ಕøತದಲ್ಲಿರುವ ಆ ಎಂಟು ಶ್ಲೋಕಗಳ ಭಾವಾರ್ಥವನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡಲು ಬಯಸುತ್ತೇನೆ:
1. ನಾನು ವಾಕ್ ಅಂಬ್ರಣಿ, ದೇವರುಗಳ ಜೊತೆ ಸಂಚರಿಸುತ್ತೇನೆ.
2. ಶತ್ರುಗಳ ನಾಶ ನನ್ನಿಂದ. ದೇವರುಗಳ ಸಂತೃಪ್ತಿ ನನ್ನಿಂದ.
3. ನಾನು ವಿಶ್ವದ ಚಕ್ರವರ್ತಿನಿ. ಹಲವು ರೂಪಗಳನ್ನು ಧರಿಸುವ ಆತ್ಮ ನಾನು. ನನಗೆ ಎಲ್ಲವೂ ತಿಳಿದಿದೆ.
4. ನನ್ನಿಂದಾಗಿಯೆ ಜೀವಿಗಳು ಜೀವಿಸುತ್ತಿದ್ದಾರೆ. ನನ್ನಿಂದ ಕಳಚಿಕೊಳ್ಳುವುದೆ ಸಾವು.
5. ನಾನು ಒಲಿದವನೆ ರಾಜನಾಗುವುದು. ಋಷಿಯಾಗುವುದು ಮತ್ತು ಸಿದ್ಧಪುರುಷನಾಗುವುದು.
6. ಭೂಮ್ಯಾಕಾಶಗಳನ್ನು ನಾನು ವ್ಯಾಪಿಸಿದ್ದೇನೆ. ಆವರಿಸಿದ್ದೇನೆ.
7. ನಾನು ಎಲ್ಲೆಡೆ, ಎಲ್ಲ ಕಾಲಗಳಲ್ಲೂ ಇದ್ದೇನೆ.
8. ನಾನು ಆಕಾಶಕ್ಕಿಂತಲೂ ಎತ್ತರಕ್ಕೆ ಬೆಳೆದಿರುವವಳು. ಭೂಮಿಗಿಂತಲೂ ಹೆಚ್ಚು ವಿಸ್ತಾರವನ್ನು ಹೊಂದಿರುವವಳು.
ಈ ಶ್ಲೋಕಗಳಿಗೆ ಹತ್ತು-ಹಲವಾರು ಬಗೆಯ ವ್ಯಾಖ್ಯಾನಗಳಿವೆ. ಹಾಗಿರುವುದು ಸಹಜ. ತಾಂತ್ರಿಕರು ‘ವರ್ಣಮಾಲೆ’ garland of letters ಕುರಿತು ತೀವ್ರ ತಪಸ್ಸನ್ನೇ ಮಾಡುತ್ತಾರೆ. ವಚನಕಾರರ ‘ಅವ್ವೆ’ಯ ಇಡೀ ದೇಹ ಅಕ್ಷರಗಳಿಂದ ಕೂಡಿರುವ ದೇಹ. ‘ವರ್ಣಾಲಂಕಾರ ಭೂಷಿತೆ’ ಅವಳು. ಇಂದು ವಿಜ್ಞಾನವೂ ಸಹ ಎಲ್ಲ ಗೋಪ್ಯಗಳನ್ನು ಅರಿಯಲು ಬಳಸುತ್ತಿರುವ ಮುಖ್ಯ ಸಾಧನ ಭಾಷೆಯೆ. ‘ವಾಕ್’ಗೆ ‘ಮಾತು’ ಎನ್ನುವ ಅರ್ಥವನ್ನು ನಾವು ಬಳಸಿದರೂ, ಅದು ಸಮೂಹದ ಸಲಕರಣೆಯಾದಾಗ ಭಾಷೆಯಾಗುತ್ತದೆ. ಭಾಷೆಗೆ ಮುಂಚೆಯೆ ‘ಧ್ವನಿ’ಗಳು, ‘ಶಬ್ದ’ಗಳು ಸಂಪರ್ಕದ ಸಂಕೇತಗಳಾಗಿದ್ದರೂ ಅವುಗಳು ‘ಭಾಷೆ’ಯಾಗಿ ಬಳಕೆಗೊಂಡ ನಂತರವೆ ನಾವು ‘ಪ್ರಾಣಿ’ವರ್ಗದಿಂದ ಭಿನ್ನವಾದ ಜೀವಿಗಳಾಗಿ ರೂಪುಗೊಂಡಿದ್ದು.
ನನ್ನನ್ನು ಬಿಡಿ, ಹತ್ತು-ಹನ್ನೊಂದು ವರ್ಷಗಳ ನನ್ನ ಮೊಮ್ಮಕ್ಕಳು ಪದೇ ಪದೆ ನನ್ನನ್ನು ಕೇಳುವುದು ಭಾಷೆಯನ್ನು ಕಂಡು ಹಿಡಿದವರು ಯಾರೆಂದು!
‘… ಅ ಆ ಇ ಈ…., A, B, C, D…ಗಳನ್ನು ಯಾರು ಮೊದಲು use ಮಾಡಿದರು ಅಂತ ನಮಗೆ ನೀವು ಹೇಳಿಕೊಟ್ಟರೆ ನಾನು ಯಾವ ಸಮಸ್ಯೆಗೆ ಬೇಕಾದರೂ ಉತ್ತರ ಹೇಳುತ್ತೇನೆ’ ಎಂದು ಪೀಡಿಸುತ್ತಾನೆ ಆರವ್! ಅವನ ಸಮಸ್ಯೆ ಈ ಕ್ಷಣಕ್ಕೂ ನನ್ನ ಸಮಸ್ಯೆಯೂ ಆಗಿದೆಯೆನ್ನುವುದು ಆತನಿಗೆ ತಿಳಿದಿಲ್ಲ! ಆದರೆ ಅವರ ವರ್ತನೆಯಿಂದ ನನಗೆ ಒಂದಂತೂ ಸ್ಪಷ್ಟವಾಗಿದೆ; ಬುದ್ಧಿ ಬಲಿಯತೊಡಗಿದ ಬಾಲ್ಯದ ಅವಸ್ಥೆಯಲ್ಲಿಯೆ ಮನುಷ್ಯನಿಗೆ ಭಾಷೆ ಅಚ್ಚರಿ ಹುಟ್ಟಿಸತೊಡಗುತ್ತದೆ. ಜಗತ್ತಿನ ಎಲ್ಲ ವಿವರಗಳು, ಸುಳ್ಳು-ಸತ್ಯಗಳು, ಗೊತ್ತಿರುವುದು-ಗೊತ್ತಿಲ್ಲದಿರುವುದು-ಎಲ್ಲವುಗಳನ್ನೂ ಒಳಗೊಂಡಿರುವ ಭಾಷೆಯ ಬಗ್ಗೆ ಸೂಫಿಗಳು ಅಪಾರ ಗೌರವ ಇಟ್ಟುಕೊಂಡಿರುತ್ತಾರೆ. ವಚನಕಾರರು ಪದೇ ಪದೆ ನಮ್ಮನ್ನು ಎಚ್ಚರಿಸುವುದು ‘ನುಡಿ’ಯನ್ನು ಕುರಿತು. ‘ನುಡಿ’ ನಡೆಗೆ ಪೂರಕವಾಗಿರಬೇಕೆಂದು ಆಗ್ರಹಿಸುತ್ತಾರೆ. ನುಡಿಯಲ್ಲಿ ನಡತೆಯನ್ನು ಪ್ರದರ್ಶಿಸಿ, ನಡೆಯಲ್ಲಿ ಅದನ್ನು ಆಚರಿಸದಿದ್ದಾಗ ಖಂಡಿಸುತ್ತಾರೆ. ‘ನಡೆ-ನುಡಿ’ಯ ಸಾಮರಸ್ಯ ಕುರಿತು ನಮ್ಮನ್ನು ಎಚ್ಚರಿಸುತ್ತಾರೆ. ಭಾಷೆಯಲ್ಲಿ ಘನತೆ ಕಳೆದುಕೊಂಡವನ ವ್ಯಕ್ತಿತ್ವದಲ್ಲಿ ಘನತೆಯಿರುವುದಿಲ್ಲವೆಂದು ತಿವಿಯುತ್ತಾರೆ.
***

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.