MENU

ಕಮಲಾಂಗಿಗಳ ಕಿತ್ತಾಟ

ದಾದಾಗಿರಿಯ ದಿನಗಳು

June 20, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಏನಿದು ‘ಮನಸ್ಸು’? – 1

ಮ್ಮನ್ನು ಕಾಡುವ ‘ದೆವ್ವ’ಗಳಿಂದ, ಅಂದರೆ ಬಯಕೆ, ಅಂಟುಗಳಿಂದ ಕಳಚಿಕೊಳ್ಳುವ ಪದ್ಧತಿ, ಪ್ರಕ್ರಿಯೆ ಸಾಮಾನ್ಯವಲ್ಲ. ನಾವು ಎಂದಿಗೂ ಅವುಗಳ ಹಿಡಿತದಿಂದ ಸಂಪೂರ್ಣವಾಗಿ ಕಳಚಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಕಡೆಯವರೆಗೂ ಅವುಗಳ ವಿರುದ್ಧ ಸೆಣಸುತ್ತಲೇ ದಾರಿ ಸವೆಸಬೇಕಾಗುತ್ತದೆ. ಕಾಡುವ, ಕಾಣುವ ಮೂರ್ತರೂಪದಲ್ಲಿ ವ್ಯಕ್ತವಾಗುವ ‘ದೆವ್ವ’ಗಳ ಬಗ್ಗೆ ಮಾಚಿಗ್ ವಿವರಿಸುತ್ತಾಳೆ:

‘The tangiable demons are numerous

When phenomena appear

before the sense organs,

if one discriminates between

what are desires and what are rejects

the tangiable demons arise

In this way, perceiving phenomena as concrete,

one is chained to the wheel of existence’

ಕಾಣುವ ‘ದೆವ್ವ’ಗಳು ಅಸಂಖ್ಯಾತ. ನಿತ್ಯ ನಮಗೆ ಇದಿರಾಗುವ ಸನ್ನಿವೇಶಗಳು ಮತ್ತು ಮನುಷ್ಯರು-ಎಲ್ಲವೂ ನಮಗರಿವಿಲ್ಲದಂತೆ ದೆವ್ವಗಳಾಗುತ್ತಾ ಮಾರ್ಪಡುತ್ತವೆ. ನಮ್ಮನ್ನು ವಿಧವಿಧವಾಗಿ ಕೆಣಕತೊಡಗುತ್ತವೆ. ಯಾವುದರಲ್ಲೂ ನಾವು ಸಂಪೂರ್ಣ ತೃಪ್ತಿಗಳನ್ನು ಅನುಭವಿಸಲಾರೆವು. ಯಾವುದಾದರೂ ಪ್ರಶಸ್ತಿ ದೊರಕಿದರೆ ಅದಕ್ಕಿಂತಲೂ ಉನ್ನತ ಪ್ರಶಸ್ತಿಗಾಗಿ ಕೊರಗುತ್ತೇವೆ; ನಿತ್ಯ ಬಾಯಿಗೆ ರುಚಿಸುವ ತಿನಿಸಿಗಾಗಿ ಹಾತೊರೆಯುತ್ತೇವೆ; ಸಿಗರೇಟು ಆರೋಗ್ಯಕ್ಕೆ ಹಾನಿಕರವೆನ್ನುವ ಭೀತಿಯಲ್ಲೆ ಅದನ್ನು ಸೇದುತ್ತೇವೆ; ಬಯಸಿದ ಹೆಣ್ಣು ಹತ್ತಿರವಾದಾಗ ಅವಳು ಅನಂತ ಕಾಲದವರೆಗೂ ಒಟ್ಟಿಗಿರಲೆಂದು ಬಯಸುತ್ತೇವೆ; ಒಂದು ಹೆಣ್ಣು ಸಿಗುವ ಕಡೆ ಹತ್ತು ಹೆಣ್ಣುಗಳು ಸಿಗಲೆನ್ನುವ ಭ್ರಮೆಯಲ್ಲಿ ಸಂಚರಿಸುತ್ತಿರುತ್ತೇವೆ; ಒಂದು ಕೋಟಿ ಲಾಟರಿ ಬಂದರೆ ಹತ್ತು ಕೋಟಿ ಮೊತ್ತವಿದ್ದಿದ್ದರೆ ಸೊಗಸಾಗಿರುತ್ತಿತ್ತೆಂದು ಹಲುಬುತ್ತಿರುತ್ತೇವೆ. ಒಂದೆ, ಎರಡೆ, ಸಾಕು-ಬೇಕು, ಬೇಕು-ಬೇಡಗಳ ದ್ವಂದ್ವಗಳಿಂದಾಗಿ ನಮ್ಮ ಬದುಕಿಗೆ ಆತುಕೊಂಡಿರುತ್ತೇವೆ. ಅವು ‘ದೆವ್ವ’ಗಳೆನ್ನುವ ಅರಿವೂ ಸಹ ನಮಗಿರುವುದಿಲ್ಲ.
ಆ ದೆವ್ವಗಳಿಗೆ ಶರಣಾಗಿ, ಅಂತಹ ಕಾಡುವಿಕೆಯೆ ವಾಸ್ತವವೆಂದು ಹೊಂದಾಣಿಕೆ ಮಾಡಿಕೊಂಡು ಬಹುತೇಕ ಜನ ಜೀವನ ಸಾಗಿಸುತ್ತಾರೆ. ಕೈ ಬೆರಳೆಣಿಕೆಯ ಹಲವರು ಮಾತ್ರ ಆ ಕಾಡುವಿಕೆಯಿಂದ ಕಳಚಿಕೊಳ್ಳಲು ಯತ್ನಿಸುತ್ತಾರೆ. ಆ ರೀತಿ ಕಳಚಿಕೊಳ್ಳುವ ವಿಧಾನವನ್ನು ಹೇಳಿಕೊಡುತ್ತಾರೆ ವಚನಕಾರರು, ಸೂಫಿಗಳು. ಟಿಬೇಟಿನ ವಚನಗಾರ್ತಿ ಮಾಚಿಗ್ ಸಹ ನಮ್ಮ ನೆರವಿಗೆ ಬರುತ್ತಾಳೆ:

‘As form is empty in its nature

do not feel attachment to it

but meditate on the emptiness.

If one feels no attachment to form,

one is liberated from the demon of eternalism

If one does not conceptualise emptiness

one is liberated from the demon of nihilism’

ಕಾಣುವ ದೆವ್ವಗಳಿಂದ ಕಳಚಿಕೊಳ್ಳಲು ನಮಗಿರುವ ಒಂದು ದಾರಿಯೆಂದರೆ ಧ್ಯಾನ, ಮೆಡಿಟೇಷನ್. ಧ್ಯಾನ ಎನ್ನುವುದು ಕೇವಲ ಮನಸ್ಸಿಗೆ ನೆಮ್ಮದಿ ನೀಡುವ ಸಾಧನವಲ್ಲ. ಅದು ದೆವ್ವಗಳನ್ನು ಬಡಿದುಹಾಕುವ ಆಯುಧವೂ ಹೌದು. ನಮ್ಮೆದುರು ಘಟಿಸುತ್ತಿರುವ ಸನ್ನಿವೇಶಗಳು, ವ್ಯವಹರಿಸುವ ವ್ಯಕ್ತಿಗಳು ಶೂನ್ಯದ, ಬಯಲಿನ ತುಣುಕುಗಳು ಎನ್ನುವುದನ್ನು ಕುರಿತು ಗಟ್ಟಿಯಾಗಿ, ಆಳವಾಗಿ ಧ್ಯಾನಿಸಿ, ಅದನ್ನು ಅಡಿಪಾಯವನ್ನಾಗಿಟ್ಟುಕೊಂಡು ಸಾಗತೊಡಗಿದಾಗ ದೆವ್ವಗಳು ಬದಿಗೆ ಸರಿಯುತ್ತವೆ. ನಮ್ಮೆದುರಿಗಿನ ವಾಸ್ತವ ಖಂಡಿತವಾಗಿಯೂ ವಾಸ್ತವತೆ. ಅದರ ಬಗ್ಗೆ ಅನುಮಾನ ಬೇಡ. ಆದರೆ ಆ ವಾಸ್ತವ ರೂಪುಗೊಂಡಿರುವುದು ಶೂನ್ಯದಿಂದ. ಬಸವಣ್ಣ ಹೇಳುವ ಹಾಗೆ ಬಯಲು ರೂಪವಾಗಿ ಪ್ರಕಟವಾಗುತ್ತದೆ. ಧ್ಯಾನದ ಪ್ರಮುಖ ಉದ್ದೇಶ ಆ ರೂಪವನ್ನು ನಮ್ಮ ಆಂತರ್ಯದಲ್ಲಿ ಬಯಲಾಗಿಸಿಕೊಳ್ಳುವುದು. ರೂಪಗಳಿಗೆ ಮರುಳಾಗದಿದ್ದಾಗ ‘ಶಾಶ್ವತತೆ’ಯ ಭ್ರಮಾತ್ಮಕ ದೆವ್ವದಿಂದ ಬಿಡುಗಡೆ. ಹಾಗೆಯೆ ಶೂನ್ಯವೆನ್ನುವುದನ್ನು ಕೇವಲ ಶುಷ್ಕ, ಬೌದ್ಧಿಕ ಪರಿಕಲ್ಪನೆಗೆ ಮಿತಿಗೊಳಿಸದೆ ಜೀವಂತ ವಾಹಕದಂತೆ ಬಳಸತೊಡಗಿದಾಗ ‘ಮಾಯಾವಾದ’ದ ದೆವ್ವಗಳಿಂದ ಬಿಡುಗಡೆ.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.