MENU

ಒಳಗೂ ಬಯಲು ಹೊರಗೂ ಬಯಲು

ದಾದಾಗಿರಿಯ ದಿನಗಳು

June 25, 2018 ಕಿರುತೆರೆ, ಪ್ರಚಲಿತ, ಬೆಂಗಳೂರು, ಮನರಂಜನೆ, ಯುವಜನ, ರಾಜ್ಯ, ಸಿನಿಮಾ, ಹವ್ಯಾಸ

ಗ್ರಾಮೀಣ ಪ್ರತಿಭೆಗೊಲಿದ ಕಿಲಾಡಿ ಕಿರೀಟ…!

ಹುಸ್ಸಪ್ಪಾ, ಕಾಮಿಡಿ ಕಿಲಾಡಿಗಳು ಸೀಸನ್ 2 ಕಾರ್ಯಕ್ರಮಕ್ಕೆ ಕೊನೆಗೂ ತೆರೆ ಬಿದ್ದಿದೆ. ಪ್ರಾರಂಭದಲ್ಲಿ ಹೆಚ್ಚು ಜನಮನ್ನಣೆ ಗಳಿಸುವತ್ತ ದಾಪುಗಾಲಿಟ್ಟ ಈ ಸೀಸನ್ ಬರುಬರುತ್ತಾ ಪ್ರೇಕ್ಷಕ ಮಹಾಪ್ರಭುವಿನ ಕೆಂಗಣ್ಣಿಗೆ ಗುರಿಯಾಗಿದ್ದು ಮರೆಯಲಾರದ ಸಂಗತಿಯೇ…. ಉತ್ತಮವಾದ ಸ್ಕಿಟ್ ಗಳಿಂದ ಕಾರ್ಯಕ್ರಮವು ಪ್ರಾರಂಭವಾಗಿ ಬರುಬರುತ್ತಾ ಸ್ಕಿಟ್ ನಲ್ಲಿ ಅಶ್ಲೀಲತೆಯೇ ಹೆಚ್ಚಾಗಿ ಕಾರ್ಯಕ್ರಮದ ಅಂದಕೆಡಿಸಿತ್ತು. ಅಷ್ಟು ಮಾತ್ರವಲ್ಲದೇ ಬೇರೆ ಭಾಷೆಯಲ್ಲಿ ಪ್ರಸಾರವಾಗುವ ಕಾಮಿಡಿ ಕಾರ್ಯಕ್ರಮಗಳ ಸ್ಕಿಟ್ ಗಳನ್ನು ನಕಲು ಮಾಡಿ ಕನ್ನಡ ಕಾಮಿಡಿಯ ಮಸಾಲೆ ಬೆರೆಸಲಾಗುತ್ತಿದೆ ಎಂಬ ಅಪವಾದವನ್ನು ಈ ಸೀಸನ್ ಹೊತ್ತುಕೊಂಡಿತ್ತು.

ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳು…..

ಇದರ ನಡುವೆಯೇ ಈ ಸೀಸನ್ ನ ಸ್ಪರ್ಧಿಗಳು ಕಳೆದ ಸೀಸನ್ ನ ಸ್ಪರ್ಧಿಗಳನ್ನು ಮೀರಿಸುವಂತಹವರೇ ಆಗಿದ್ದು, ಅವರ ಆಂಗಿಕ ಅಭಿನಯ, ಪಾತ್ರದೊಳಗೆ ಪ್ರವೇಶಿಸುವ ಶೈಲಿಯೂ ನೋಡುಗರನ್ನು ನಿಬ್ಬೆರಗಾಗಿಸಿತ್ತು. ಇವರಲ್ಲಿ ರಾಯಚೂರಿನ ಚಿದಂಬರ ಪೂಜಾರಿ, ಧಾರವಾಡದ ಸದಾನಂದ, ಮೈಸೂರಿನ ರಂಗನಾಥ, ಹಾಸನದ ವಾಣಿ, ಮಂಗಳೂರಿನ ಧೀರಜ್, ಕುಂದಾಪುರದ ಸೂರ್ಯ, ಬೆಂಗಳೂರಿನ ಮಂಥನ, ಹಾಸನದ ಸೀರುಂಡೆ ರಘು, ರಾಮದುರ್ಗದ ಅಪ್ಪಣ್ಣ, ಚಿತ್ರದುರ್ಗದ ಬರ್ಕತ್ ಆಲಿ, ಬಿಜಾಪುರದ ಶಿವಾನಂದ, ಗುಲ್ಬರ್ಗಾದ ರಚನಾ, ಮಡೆನೂರಿನ ಮನು ಪ್ರಮುಖ ಸ್ಪರ್ಧಿಗಳಾಗಿದ್ದರು.

ಸುಮಾರು 2 ರಿಂದ 2 ವರೆ ತಿಂಗಳವರೆವಿಗೂ ಕಾರ್ಯಕ್ರಮ ಪ್ರಸಾರವಾಗಿ ಸುಮಾರು 39 ಎಪಿಸೋಡುಗಳನ್ನು ಪ್ರದರ್ಶಿಸಿತ್ತು. ನಿನ್ನೆ ಭಾನುವಾರ ತನ್ನ 40 ಎಪಿಸೋಡಿನ ಗ್ರಾಂಡ್ ಫಿನಾಲೆಯ ಮೂಲಕ ತನ್ನ ಕೊನೆಯ ಪ್ರದರ್ಶನವನ್ನು ನೀಡಿ ಕಾಮಿಡಿ ಕಿಲಾಡಿ ಸೀಸನ್ 2 ಕಾರ್ಯಕ್ರಮವು ಮುಕ್ತಾಯಗೊಂಡಿತು.

ಈ ಬಾರಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳೂ ಸಹ ತಮಗೆ ದೊರೆತ ಸ್ಕಿಟ್ ಗೆ ಅನುಗುಣವಾಗಿ ಉತ್ತಮವಾಗಿಯೇ ತಮ್ಮ ಅಭಿನಯವನ್ನು ತೋರಿ, ಕಾರ್ಯಕ್ರಮದ ಜಡ್ಜ್ ಗಳಾದ ನವರಸ ನಾಯಕ ಜಗ್ಗೇಶ್, ವಿಕಟಕವಿ ಯೋಗರಾಜ್ ಭಟ್, ಮತ್ತು ಕ್ರೇಜಿ ಕ್ವೀನ್ ರಕ್ಷಿತಾರವರ ಮನಗೆದ್ದಿದ್ದಲ್ಲದೇ, ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು.

CK 24-06-18

ಎಲ್ಲರ ಮನಸಲ್ಲಿ ಉಳಿಯುವ ಈ ಗೆಲುವಿನ ಕ್ಷಣ ನೋಡಿ! ನಮ್ಮ ಮಡೆನೂರ್ ಮನುಗೆ Wish ಮಾಡಿ !#ZeeKannada #OPPOComedyKhiladigalu #Season2 #NoTensionSmilePlease #GrandFinale #WinningMoment

Gepostet von Zee Kannada am Sonntag, 24. Juni 2018

ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲರೂ ವಿಜಯಿಗಳಾದರೂ, ಕೊನೆಗೆ ಮಾತ್ರ ಕಾಮಿಡಿ ಕಿಲಾಡಿ ಕಿರೀಟವನ್ನು ಒಬ್ಬರಿಗೆ ನೀಡಲಾಗಿದ್ದು, ಪ್ರಾರಂಭದಿಂದಲೂ ತನ್ನ ಅಭಿನಯದಿಂದ, ತನ್ನ ಮುಗ್ದತೆಯಿಂದ, ಮಿಮಿಕ್ರಿ ಕಲೆಯಿಂದ ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡಿದ ಮಡೆನೂರಿನ ಮನು ಈ ಬಾರಿಯ ಕಾಮಿಡಿ ಕಿಲಾಡಿಯ ಕಿರೀಟವನ್ನು ಧರಿಸಿದ್ದಾನೆ.

ಮನು ಹಿನ್ನೆಲೆ…..

ಕಾರ್ಯಕ್ರಮದಲ್ಲಿ ಕಳೆದ ಸೀಸನ್ ನ ವಿನ್ನರ್ ಶಿವರಾಜ್ ಕೆ.ಆರ್. ಪೇಟೆಯ ಹಾಗೇ ಎಂದು ಹೆಸರು ಗಳಿಸಿದ್ದ ಮನು, ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ತನ್ನ ನಟನೆಯ ಚಾತುರ್ಯದಿಂದ ಅವಕಾಶ ಗಿಟ್ಟಿಸಿಕೊಂಡ ಅದ್ಬುತ ಪ್ರತಿಭೆ. ಈತ ಹಾಸನ ಜಿಲ್ಲೆಯ ಮಡೆನೂರಿನವನು. ಸಿನಿಮಾದಲ್ಲಿ ಅದ್ಬುತ ಹೆಸರು ಮಾಡಬೇಕೆಂದು ಬದುಕು ಕೊಟ್ಟ ವ್ಯವಸಾಯವನ್ನೇ ಬದಿಗಿಟ್ಟು ಬೆಂಗಳೂರಿಗೆ ಹಾರಿದ ಈತ ಅವಕಾಶಕ್ಕಾಗಿ ತಟ್ಟದೇ ಉಳಿದ ಕದಗಳಿಲ್ಲ, ಆದ ಅವಮಾನಗಳಿಗೆ ಲೆಕ್ಕವಿಲ್ಲ, ಕಣ್ಣೀರು ಹಾಕದ ದಿನಗಳಿಲ್ಲ. ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ನಟಿಸಿದರೂ ಆ ಸಿನಿಮಾಗಳಿಗೆ ಬಿಡುಗಡೆ ಭಾಗ್ಯ ದೊರೆಯಲಿಲ್ಲ. ಬಿಡುಗಡೆಯಾದರೂ ಆತನ ಪಾತ್ರಗಳಿಗೆ ಕತ್ತರಿ ಪ್ರಯೋಗದ ‘ಭಾಗ್ಯ’ಪ್ರಾಪ್ತಿಯಾಗಿತ್ತು.

ಈತ ಪ್ರಮುಖವಾಗಿ ಚೌಕ, ಪೊರ್ಕಿ ಹುಚ್ಚ ವೆಂಕಟ್, ಅಂಬಾಸಡರ್ ಎಂಬ ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾನೆ. ಆದರೆ ಆ ಚಿತ್ರಗಳಲ್ಲೆಲ್ಲೂ ಆತನ ಪಾತ್ರದ ಕುರುಹೇ ಕಾಣಿಸುವುದಿಲ್ಲ. ಮೂಲತಃ ಈತ ಮಿಮಿಕ್ರಿ ಕಲಾವಿದ. ಹೆಸರಾಂತ ನಟರ ಧ್ವನಿಯನ್ನು ಅನುಕರಿಸಿ ತನ್ನತ್ತ ಸೆಳೆಯಬಲ್ಲ ನಿಪುಣತೆಯನ್ನು ಹೊಂದಿರುವ ಈತನಿಗೆ ಈತನ ಧ್ವನಿಯೇ ಬಂಡವಾಳ. ಇವನ ಜೀವನ ನಿರ್ವಹಣೆಯೂ ಸಹ ಇದರಿಂದಲೇ. ಬೆಂಗಳೂರಿಗೆ ಬಂದ ಹೊಸತರಲ್ಲಿ ಆರ್ಕೇಸ್ಟ್ರಾಗಳಲ್ಲಿ ಮಿಮಿಕ್ರಿ, ನಟನೆ, ಹಾಡು, ನೃತ್ಯ ಎಂಬಿತ್ಯಾದಿ ಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ಆರ್ಕೇಸ್ಟ್ರಾ ತಾತ್ಕಾಲಿಕ ಉದ್ಯೋಗವಾದ್ದರಿಂದ ತನ್ನ ಜೀವನ ನಿರ್ವಹಣೆಗೆ ಬೇಕರಿ ಕೆಲಸ, ಸ್ಥಳೀಯ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಣೆ, ನಟನೆ ಮುಂತಾದ ಪ್ರಕಾರಗಳಲ್ಲಿಯೂ ತನ್ನ ವೃತ್ತಿ ಚಾತುರ್ಯತೆಯನ್ನು ಪ್ರದರ್ಶಿಸಿದ್ದನು.

ಇದರ ಮಧ್ಯೆಯೂ ತನ್ನ ಮಿಮಿಕ್ರಿ ಕಲೆಯನ್ನು ಬೆಳೆಸಿಕೊಂಡು ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಭಾಗವಹಿಸಿ, ನಿರೀಕ್ಷೆಗೂ ಮೀರಿ, ಅಂತಿಮ ಸುತ್ತಿಗೆ ಆಯ್ಕೆಯಾಗಿ, ಕೊನೆಗೆ ವಿಜಯದ ಮಾಲೆಯನ್ನು ಧರಿಸಿರುವುದು ಆತನ ಶ್ರಮ, ಪ್ರತಿಭೆ, ಕನಸಿಗೆ ಸಂದ ದೊಡ್ಡ ಗೌರವವೇ ಸರಿ….

ಈತನ ಪ್ರತಿಭೆಯು ಇನ್ನೂ ಮುಗಿಲೆತ್ತರಕ್ಕೆ ಏರಿ, ಈತನ ಬದುಕು ಹಸನಾಗಲಿ, ಅಲ್ಲದೇ ಅದ್ಬುತ ಕನಸೊತ್ತು ಹಳ್ಳಿಗಳಿಂದ ಪಟ್ಟಣಕ್ಕೆ ಅದಾವುದೋ ಉಮೇದಿನಲ್ಲಿ ಬರುವ ಎಲ್ಲ ಕನಸುಗಾರರಿಗೆ ಈತನ ಹಾದಿ ದಾರಿದೀಪವಾಗಲಿ… ಆಲ್ ದಿ ಬೆಸ್ಟ್ ಮನು….

Tags: , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.