MENU

ದಾದಾಗಿರಿಯ ದಿನಗಳು

ದಾದಾಗಿರಿಯ ದಿನಗಳು

June 28, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಭೀಕರ ದೆವ್ವ: ಅಹಂ – 2

ಇಂತಹ ಎಷ್ಟು ಪ್ರಸಂಗಗಳು ನಿತ್ಯ ನಮ್ಮನ್ನು ಕಾಡಬಹುದು? ಅಹಂಗೆ ಅಂಟಿಕೊಳ್ಳುವ ಈ ಗುಣದಿಂದ ಹೊರಬರದಿದ್ದರೆ ಯಾವುದೆ ದೆವ್ವಗಳಿಂದಲೂ ನಾವು ಕಳಚಿಕೊಳ್ಳಲು ಸಾಧ್ಯವಿಲ್ಲ. ಅಹಂನ ಒಂದು ವೈಶಿಷ್ಟ್ಯವೇನು ಗೊತ್ತೆ? ನಮ್ಮ ಕಣ್ಣು ತೆರೆಸುವುದೂ ಅದೆ; ಕುರುಡುಗೊಳಿಸುವುದೂ ಅದೆ. ಅದಿಲ್ಲದೆ ನಾವು ಸಾಮಾಜಿಕ ಬದುಕಿನಲ್ಲಿರಲಿ, ಆಂತರ್ಯದ ಪಯಣದಲ್ಲಿಯೂ ಒಂದೇ ಒಂದು ಹೆಜ್ಜೆ ಕ್ರಮಿಸಲು ಸಾಧ್ಯವಾಗುವುದಿಲ್ಲ. ನಾವು ಯಾವುದೆ ಕ್ರಿಯೆಯನ್ನು ಕೈಗೊಳ್ಳುವುದಕ್ಕೂ ನಮ್ಮ ಅಹಂ ಮೂಲ ಕಾರಣ ಪ್ರೇರಣೆ. ಹಾಗೆಯೆ ನಮ್ಮಲ್ಲಿ ಮಾನಸಿಕ ಕ್ಷೋಭೆಯನ್ನುಂಟುಮಾಡಿ, ನಮ್ಮ ಚೈತನ್ಯವನ್ನು ಅಲುಗಾಡಿಸುವ ರೋಗವೂ ಸಹ ಅದೇ ಅಹಂ. ಅದನ್ನು ಸಮತೋಲನದಲ್ಲಿಟ್ಟುಕೊಂಡಾಗ ಯಾವುದೆ ರೀತಿಯ ಧ್ಯಾನದ ಅಗತ್ಯವೂ ಇರುವುದಿಲ್ಲ. ಅಹಂ ಅನ್ನು ಹಿಡಿತಕ್ಕೆ ತೆಗೆದುಕೊಂಡರೆ ಎಲ್ಲವೂ ನಿಚ್ಚಳವಾಗತೊಡಗುತ್ತದೆ. ಆ ದೆವ್ವವನ್ನು ಹಿಡಿತಕ್ಕೆ ತೆಗೆದುಕೊಂಡ ನಂತರ, ಅಂದರೆ ಅದರ ಹಿಡಿತದಿಂದ ಕಳಚಿಕೊಂಡ ನಂತರ ಹೇಗಿರುತ್ತದೆ ಗೊತ್ತೆ?

‘Emaho! Marvelous!

Eliminating one’s own pride and ego-clinging

one pacifies the demons!

Having a profound insight that there is no root

one obtains the real state of complete awakening!

So be at ease in a free condition

and let everything be, in its own natural state’

***
ಮನಸ್ಸು ಮತ್ತು ಧ್ಯಾನಗಳಿಗೆ ಅಧ್ಯಾತ್ಮಿಕ ಪಥಗಳಲ್ಲಿ ಎಲ್ಲಿಲ್ಲದ ಪ್ರಾಮುಖ್ಯತೆ. ಅವುಗಳನ್ನು ಬಳಸಿಯೆ ನಾವು ಅವುಗಳ ಮಿತಿಯಿಂದ ಹೊರಬರಲು ಸಾಧ್ಯ. ಕಂಗೆಟ್ಟಿರುವ ಮನಸ್ಸಿಗೆ ತಿಳಿವನ್ನು ನೀಡುವ ಸಾಮಥ್ರ್ಯವಿರುವುದು ಅದೇ ಮನಸ್ಸಿಗೆ ಮಾತ್ರ. ಆದರೆ ಆ ತಿಳಿವನ್ನು ಗ್ರಹಿಸಲು ನಾವು ಧ್ಯಾನಸ್ಥ ಸ್ಥಿತಿಗೆ ಹೋಗಬೇಕಾಗುತ್ತದೆ.
ಸಮಸ್ಯೆ ಮನಸ್ಸಲ್ಲ. ಮನಸ್ಸನ್ನು ಕಂಗೆಡಿಸುವ ಅದರ ಹೊರಗಿನ ಸಂಗತಿಗಳು. ಇಂದ್ರಿಯಗಳಿಂದ ಉಂಟಾಗುವ ಅನುಭವ. ಬದುಕು ನಮ್ಮಲ್ಲಿ ಸೃಷ್ಟಿಸುವ ಸಂಬಂಧಗಳು. ಮನಸ್ಸು ಆಗಸದಂತೆ. ಅದು ಸದಾ ನಿರ್ಮಲವಾಗಿರುತ್ತದೆ. ನಿರ್ಮಲ ಆಕಾಶದ ನೀಲಿಯನ್ನು ಆಗಾಗ ಮೋಡಗಳು ಕವಿಯುತ್ತಿರುತ್ತವೆ. ಆಗ ಆಕಾಶ ಕಡು ಅಥವಾ ತಿಳಿ ಬೂದಿ ಬಣ್ಣವಾಗುತ್ತದೆ. ಆದರೆ ಆ ಮೋಡಗಳು ಶಾಶ್ವತವಾಗಿ ಇರುವುದಿಲ್ಲವೆಂದು ನಮಗೆ ಗೊತ್ತು. ನೋಡು ನೋಡುತ್ತಿರುವಂತೆಯೆ ಕರಗಿಹೋಗುತ್ತವೆ. ಆಕಾಶ ತನ್ನ ಸಹಜ ಸ್ಥಿತಿಯಲ್ಲಿ ಕಂಗೊಳಿಸತೊಡಗುತ್ತದೆ.
ಮನಸ್ಸನ್ನೂ ಅಷ್ಟೇ. ಆಗಾಗ ಹೊರಗಿನ ಮೋಡಗಳು ಅದನ್ನು ಮುತ್ತುತ್ತಿರುತ್ತವೆ. ಅದಕ್ಕೆ ನೆಮ್ಮದಿಗೆ ಮುತ್ತಿಗೆ ಹಾಕತೊಡಗುತ್ತವೆ. ಆದರೆ ಅಂತಹ ಸಂದರ್ಭಗಳಲ್ಲಿ ನಾವು ಕನಲಿಹೋಗುತ್ತೇವೆ. ಸಿಟ್ಟು-ಆತಂಕಗಳಿಗೆ ಜಾರುತ್ತೇವೆ. ಅವು ಒಣಗಿಹೋಗುವ ಬಿಂದುಗಳೆಂದು ಗುರುತಿಸುವಲ್ಲಿ, ಕಂಡುಹಿಡಿದುಕೊಳ್ಳುವಲ್ಲಿ ಸೋಲುತ್ತೇವೆ. ಆಕಾಶಕ್ಕೂ, ಮನಸ್ಸಿಗೂ ಇರುವ ವ್ಯತ್ಯಾಸವೆಂದರೆ, ಆಕಾಶದಲ್ಲಿನ ಮೋಡಗಳು ಅದರ ಮೈಮೇಲೆ ಛಾಯೆಗಳನ್ನು ಮೂಡಿಸುವುದಿಲ್ಲ, ಆದರೆ ಮನಸ್ಸನ್ನು ಘಾಸಿಗೊಳಿಸುವ ಸಂಗತಿಗಳು ನಮ್ಮ ಬದುಕಿಡೀ ಶಾಶ್ವತ ಛಾಯೆಗಳಾಗಿ ಅಲ್ಲಿ ನೆಲೆಸಿಬಿಟ್ಟಿರುತ್ತದೆ. ಮನಸ್ಸು ಮಡುಗಟ್ಟುತ್ತದೆ; ಬಗ್ಗಡವಾಗುತ್ತದೆ.


ಇದಕ್ಕೆ ಮೂಲ ಕಾರಣ ನಮ್ಮನ್ನು ನಾವು ಗುರುತಿಸಿಕೊಂಡಿರುವ ಈ ಕ್ಷಣದ ಅಹಂ. ಅದು ನಮ್ಮನ್ನು ತೀರ ಮಿತಿಯಲ್ಲಿರಿಸುತ್ತದೆ. ನಮ್ಮ ಸುತ್ತಲೂ ತಡೆಗೋಡೆಗಳನ್ನು ನಿರ್ಮಿಸುತ್ತದೆ. ನಮಗೇ ಅರಿವಿಲ್ಲದಂತೆ ನಮ್ಮನ್ನು ಅದರೊಳಗೆ ಕೂಡಿಟ್ಟಿರುತ್ತದೆ. ನಮ್ಮ ಬದುಕು ಕೇವಲ ಆ ತಡೆಗೋಡೆಗಳ ನಡುವಿನ ಬದುಕಲ್ಲ ಎಂದು ಕಂಡುಹಿಡಿದುಕೊಳ್ಳುವ ಹೊತ್ತಿಗೆ ನಾವು ಬಸವಳಿದು ಹೋಗುತ್ತೇವೆ. ಕಾಲನ ಹೊಡೆತದಿಂದಾಗಿ ನಮ್ಮ ಚೈತನ್ಯ ಕುಂದಿಹೋಗಿರುತ್ತದೆ. ನಾವು ಎಚ್ಚರಗೊಂಡರೂ ಏನೂ ಮಾಡಲಾಗದ ಸ್ಥಿತಿಗೆ ತಲುಪಿರುತ್ತೇವೆ.
ಆ ಕಾರಣದಿಂದಾಗಿಯೆ ಮಹಾನ್ ಚಿಂತಕರು ನಮ್ಮನ್ನು ‘ಈ ಕ್ಷಣ’ದಲ್ಲೆ ಎಚ್ಚರವಾಗಲು ಆಗ್ರಹಿಸುವುದು. ನಾಳೆ ಎನ್ನಬೇಡ, ನಾಳೆ ತಡವಾಗಬಹುದು ಎಂದು ನಮ್ಮನ್ನು ತಿವಿಯುತ್ತಾರೆ. ನಾಳೆ ಈ ಕ್ಷಣದಲ್ಲಿಯೆ ಇದೆ ಎಂದು ಮನದಟ್ಟು ಮಾಡಿಸುತ್ತಾರೆ.
ಹಾಗೆಂದು ಈ ಕ್ಷಣದಿಂದ ಧ್ಯಾನಕ್ಕೆ ಕೂರುವುದನ್ನು ರೂಢಿಸಿಕೊಂಡುಬಿಟ್ಟರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾವ ಬಗೆಯ ಸಿದ್ಧಿಗಳೂ ಸಿದ್ಧಿಸುವುದಿಲ್ಲ. ಆ ಧ್ಯಾನದ ಜೊತೆಗೆ ಹೃದಯವನ್ನೂ ತಿಳಿಗೊಳಿಸುವ, ಬೆಚ್ಚಗಿರಿಸುವ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಹಾಗಾಗಿಯೆ ವಚನಕಾರರು ಒಳ-ಹೊರಗಿನ ಸಮನ್ವಯವನ್ನು ಕುರಿತು ನಮ್ಮನ್ನು ಒತ್ತಾಯಿಸುವುದು.
ಆ ರೀತಿ ಒಳ-ಹೊರಗನ್ನು ಪರಿಶುದ್ಧವಾಗಿಟ್ಟುಕೊಳ್ಳುವುದರಲ್ಲಿ ನಮಗೆ ನೆರವಾಗುವ ಮತ್ತೊಂದು ಶಿಸ್ತೆಂದರೆ ಝೆನ್. ಅದು ಮನಸ್ಸಿನ ಯಾಗ; ಮಾನಸಿಕ ಯೋಗ. ನಮ್ಮ ಮನಸ್ಸನ್ನು ಹರಿತಗೊಳಿಸುವುದರ ಜೊತೆಗೆ ಅದು ವಿಚಿತ್ರ ಬಿಡುಗಡೆಯನ್ನು ನೀಡುತ್ತದೆ. ಬುದ್ಧನ ಧ್ಯೇಯ, ಧೋರಣೆ ಮತ್ತು ಉಪದೇಶಗಳನ್ನು ಝೆನ್ ತನ್ನದೆ ಆದ ವಿಧಾನದಲ್ಲಿ ನಮಗೆ ಮನದಟ್ಟು ಮಾಡಿಸುತ್ತದೆ. ಅಷ್ಟೆಲ್ಲಾ ನಾವು ಮನಸ್ಸಿಗೆ ಕಸರತ್ತು ನೀಡುವ ಅನಿವಾರ್ಯತೆಯಾದರೂ ಏನೆನ್ನುವ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡಬಹುದು. ನಮ್ಮ ಬದುಕು ಅಸಂಬದ್ಧವಿರಬಹುದೆನ್ನುವ ಬೌದ್ಧಿಕ ಅನುಮಾನವೆ ಅದಕ್ಕೆ ಕಾರಣ. ನಾವು ಸಿಸಿಫಸ್‍ನ ಪ್ರಸಂಗವನ್ನು ಆಳವಾಗಿ ಪರಿಶೀಲಿಸುವ ಮೂಲಕ ಅನುಮಾನದ ಎಲ್ಲ ಮಗ್ಗಲುಗಳನ್ನೂ ಗಮನಿಸಬಹುದು.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.