MENU

ದಾದಾಗಿರಿಯ ದಿನಗಳು

ದಾದಾಗಿರಿಯ ದಿನಗಳು

July 1, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಸಿಸಿಫಸ್ ಮತ್ತು ಸಾವು – 1

ಸಿಸಿಫಸ್ ರಾಜನೊ ಅಥವಾ ಹೆದ್ದಾರಿ ಡಕಾಯಿತನೊ ಎನ್ನುವುದನ್ನು ಕುರಿತು ಅವನ ಪುರಾಣವನ್ನು ರಚಿಸಿದವರಲ್ಲೆ ಬಹಳಷ್ಟು ಗೊಂದಲವಿದೆ. ‘ಈಲಿಯಡ್’ನ ರಚನಕಾರ ಹೋಮರ್ ಆತನನ್ನು ರಾಜನೆಂದರೆ, ಮತ್ತಿಬ್ಬರು ಡಕಾಯಿತನೆನ್ನುತ್ತಾರೆ. ಆದರೆ ಯಾವುದೆ ಗೊಂದಲವಿಲ್ಲದ ನಂಬಿಕೆಯೆಂದರೆ ಅವನು ‘ಡೆತ್’ ಜೊತೆ ನಡೆದುಕೊಂಡ ರೀತಿ. ಹೋಮರನ ಪ್ರಕಾರ, ಹೆಂಡತಿ, ಮಕ್ಕಳು, ಬಂಧು, ಬಾಂಧವರು ಮತ್ತು ಪ್ರಜೆಗಳ ಜೊತೆ ನೆಮ್ಮದಿಯಿಂದ ಜೀವಿಸುತ್ತಿದ್ದ ಸಿಸಿಫಸ್. ಅವನ ಹತ್ತಿರ ಒಂದು ದಿನ ಸಹಜವಾಗಿ ಸಾವಿನ ಅಧಿಪತಿ ಥನಟೋಸ್ ಬರುತ್ತಾನೆ. ‘ನಿನ್ನ ಅವಧಿ ಮುಗಿಯಿತು… ನನ್ನೊಡನೆ ಬಾ…’ ಎಂದು ಕರೆಯುತ್ತಾನೆ. ಆಗ ಪ್ರಪಂಚ ಈಗಿನ ರೀತಿ ಇರಲಿಲ್ಲ ಬಿಡಿ. ಮನುಷ್ಯರು, ಪಿಶಾಚಿಗಳು, ದೇವರುಗಳು ಮತ್ತು ಸಾವು ಪರಸ್ಪರ ಒಡನಾಡುತ್ತಾ, ಮಾತು-ಕತೆಯಾಡುತ್ತಾ ಕಾಲನ ಹಾದಿಯಲ್ಲಿ ಪಯಣಿಸುತ್ತಿದ್ದ ಕಾಲ ಅದು.


ಸಿಸಿಫಸ್ ಸಾವಿನೊಡನೆ ತಕರಾರು ಎತ್ತುವುದಿಲ್ಲ. ಆದರೂ ಥನಟೋಸ್‍ನೊಡನೆ ತನಗೆ ಸಾಕಷ್ಟು ಆತ್ಮೀಯತೆಯಿದ್ದುದರಿಂದ, ‘…ನನ್ನನ್ನು ಹೇಗೆ ಕರೆದುಕೊಂಡು ಹೋಗುವೆ…?’ ಎಂದು ಕೇಳುತ್ತಾನೆ. ಸಾಮಾನ್ಯವಾಗಿ ತಮಗೆ ಶರಣಾದವರನ್ನು ಅಧಿಕಾರಸ್ಥರು ಹೇಗೆ ಕರೆದೊಯ್ಯುತ್ತಾರೆ? ಭಟರ, ಅಂದರೆ ಇಂದಿನ ಪೊಲೀಸರ ರೀತಿ: ಕೈಗೆ ಕೋಳ ಹಾಕಿ ಎಳೆದುಕೊಂಡು ಹೋಗುವುದು. ಆದರೆ ಸಿಸಿಫಸ್ ಯಾವ ಪ್ರತಿರೋಧವನ್ನೂ ಒಡ್ಡದೆ ಶರಣಾಗಿರುವುದರಿಂದ, ಎಳೆದುಕೊಂಡು ಹೋಗುವ ಬದಲು, ಬೇಡಿ ಹಾಕಿ ಕರೆದುಕೊಂಡು ಹೋಗುವುದಾಗಿ ಹೇಳುತ್ತಾನೆ. ಅವನಿಗೆ ಸಾಕಷ್ಟು ರಾಜಾತಿಥ್ಯ ನೀಡಿ, ಸಂಪ್ರೀತಗೊಳಿಸಿದ್ದ ಸಿಸಿಫಸ್, ‘…ಕೋಳವನ್ನು ನನ್ನ ಕೈಗೆ ಯಾವ ರೀತಿ ತೊಡಿಸುತ್ತೀಯ…?’ ಎಂದು ಕೇಳುತ್ತಾನೆ. ಬಹುಶಃ ಆಗ ಥನಟೋಸ್ ಕೈ ನೀಡಲು ಸಿಸಿಫಸ್‍ಗೆ ಸೂಚಿಸಿರಬಹುದು. “…ಹೇಗಿದ್ದರೂ ನನಗೆ ಅದನ್ನು ತೊಡಿಸಿ ಎಳೆದುಕೊಂಡು ಹೋಗುವುದರಿಂದ… ಇಷ್ಟು ಬೇಗನೆ ನನಗೆ ಹಾಕಬೇಡ ಥನಟೋಸ್… ಇನ್ನೊಂದೆರಡು ಗ್ಲಾಸು ಮದ್ಯ ಮುಗಿಸಬೇಕಿದೆ… ನಿನ್ನ ಕೈಗೆ ಹಾಕಿಕೊಂಡು ತೋರಿಸು…’ ಎನ್ನುತ್ತಾನೆ. ಅಕಸ್ಮಾತ್ ನೀನೇನಾದರೂ ದೇವತೆಗಳು ಅದರಲ್ಲೂ ನಮ್ಮ ಯಮರಾಜ, ಗ್ರೀಕರ ಥನಟೋಸ್ ಮುಂತಾದ ಸಾವಿನ ದೇವತೆಗಳು ಬುದ್ಧವಂತರೆಂದು ಭಾವಿಸಿದ್ದರೆ, ಆ ಭಾವನೆಯನ್ನು ತಿದ್ದಿಕೊಳ್ಳುವುದು ಒಳ್ಳೆಯದು. ಏಕೆಂದರೆ, ಅವರೆಷ್ಟು ಲೋಲುಪರಾಗಿರುತ್ತಾರೆಂದರೆ ಅವರಿಗೆ ಬುದ್ಧಿವಂತಿಕೆ ಬೆಳೆಸಿಕೊಳ್ಳುವ ಅಗತ್ಯವೆ ಉಂಟಾಗುವುದಿಲ್ಲ!
ಸಿಸಿಫಸ್ ಹೇಳಿದಂತೆ, ತನ್ನ ಕೈಗೆ ಕೋಳ ತೊಡಿಸುವುದರ ಮೂಲಕ ಅದನ್ನು ಹೇಗೆ ಹಾಕುತ್ತೇನೆಂದು ತೋರಿಸಿಕೊಡುತ್ತಾನೆ ಥನಟೋಸ್. ನಮ್ಮೆಲ್ಲರಂತೆ ಜಾಣನಾದ ಸಿಸಿಫಸ್ ತಕ್ಷಣವೆ ಅವನ ಇನ್ನೊಂದು ಕೋಳವನ್ನು ಪಕ್ಕದಲ್ಲೆ ಇದ್ದ ಕಬ್ಬಿಣದ ಗೂಟಕ್ಕೆ ತೊಡಿಸಿ ಸಾವಿನ ದೇವರನ್ನು ಬಂಧಿಸಿಬಿಡುತ್ತಾನೆ!


ಜಗತ್ತಿನಲ್ಲಿ ಸಾವಿನ ನಿಯಂತ್ರಣ ತಪ್ಪಿಹೋಗುತ್ತದೆ! ಯುದ್ಧವಾಡುತ್ತಿರುವ ಸೈನಿಕರು ಸಾಯುವುದೆ ಇಲ್ಲ! ಸಾಯುವಂತೆ ಇದಿರಾಳಿ ತಿವಿದರೂ ಸತ್ತವರಂತೆ ನೆಲಕ್ಕೆ ಬಿದ್ದು ಮತ್ತೆ ಚಿಮ್ಮತೊಡಗುತ್ತಾರೆ! ಯುದ್ಧಗಳು ಆಟಗಳಂತಾಗಿಬಿಡುತ್ತವೆ. ವಯಸ್ಸಾಗಿ ಸಾಯಬಹುದೆಂದು ನರಳುತ್ತಿದ್ದವರು ಇದ್ದಕ್ಕಿದ್ದ ಹಾಗೆ ಚೇತರಿಸಿಕೊಂಡು ಜೀವಂತಿಕೆಯಿಂದ ಪುಟಿಯತೊಡಗುತ್ತಾರೆ.
ತಮ್ಮ ತಮ್ಮ ವಿಲಾಸ-ವೈಭೋಗಗಳಲ್ಲಿ ಮಗ್ನವಾಗಿರುವ ದೇವಾನುದೇವತೆಗಳಿಗೆ ತಕ್ಷಣದಲ್ಲೆ ಸಾವಿನ ಬಂಧನವಾಗಿರುವ ಸಂಗತಿ ತಿಳಿಯುವುದಿಲ್ಲ. ಆದರೆ ಸ್ವರ್ಗ ಮತ್ತು ನರಕಗಳಲ್ಲಿ ಸಂಖ್ಯೆ ಏರುಪೇರಾಗದಿರುವುದು ಗಮನಕ್ಕೆ ಬಂದು, ಅದರ ಬಗ್ಗೆ ಪ್ರಶ್ನಿಸಲು ಥನಟೋಸ್‍ನೊಡನೆ ಮಾತನಾಡಲು ಯತ್ನಿಸುತ್ತಾರೆ. ಆಗ ಥನಟೋಸ್‍ನನ್ನು ಸಿಸಿಫಸ್ ಬಂಧಿಸಿರುವುದು ಅರಿವಿಗೆ ಬರುತ್ತದೆ. ಬಂಧನಕ್ಕೊಳಗಾಗಿರುವ ಥನಟೋಸ್‍ನನ್ನು ಬಿಡಲು ಸಿಸಿಫಸ್‍ಗೆ ಆಗ್ರಹಿಸುತ್ತಾರೆ. ಆದರೆ ಅವನು ಅದಕ್ಕೆ ಸೊಪ್ಪುಹಾಕುವುದಿಲ್ಲ. ಸಾಮಾನ್ಯವಾಗಿ ಮನುಷ್ಯರ ತಂಟೆಗೆ ಥನಟೋಸ್‍ನನ್ನು ಬಿಟ್ಟು ಇತರ ಯಾವ ದೇವರುಗಳೂ ಬರುತ್ತಿರಲಿಲ್ಲ. ಆದರೆ ಈಗ ಅವನೆ ಬಂಧನಕ್ಕೊಳಗಾಗಿರುವುದರಿಂದ, ಅವನನ್ನು ಬಿಡಿಸಿಕೊಂಡು ಬರುವುದರ ಜೊತೆಗೆ ಸಿಸಿಫಸ್‍ನನ್ನು ಎಳೆದು ತರಲು ಮರ್‍ಕ್ಯುರಿ ದೇವರನ್ನು ಕಳಿಸುತ್ತಾರೆ. Mercury ಗೊತ್ತಲ್ಲ, ಪಾದರಸ! ಆ ದೇವತೆಯನ್ನು ಎದುರಿಸುವ ಸಾಮಥ್ರ್ಯ ಸಿಸಿಫಸ್‍ಗಿರುವುದಿಲ್ಲ. ಆತನ ಮುಂದೆ ತನ್ನ ಸೋಲು ಮತ್ತು ಸಾವು ಖಚಿತವೆಂದು ಅವನಿಗೆ ಗೊತ್ತಿರುತ್ತದೆ. ಆತ ತನ್ನ ಪತ್ನಿಯಿಂದ ಒಂದು ಭಾಷೆ ಪಡೆಯುತ್ತಾನೆ: ನನ್ನ ಜೀವವನ್ನು ದೇವರುಗಳು ಎಳೆದುಕೊಂಡು ಹೋದ ನಂತರ ಉಳಿಯುವ ನನ್ನ ಶವಕ್ಕೆ ಯಾವುದೇ ರೀತಿಯಲ್ಲಿ ಸಂಸ್ಕಾರಬದ್ಧ ಆಚರಣೆಗಳನ್ನು ಎಸಗದೆ, ಅದನ್ನು ರಸ್ತೆಯ ಮಧ್ಯೆ ಎಸೆಯಬೇಕು. ಪತ್ನಿಯಲ್ಲಿ ಆತನ ಕೋರಿಕೆ ಅಚ್ಚರಿ ಹುಟ್ಟಿಸಿದರೂ, ಎಷ್ಟಾದರೂ ಗಂಡನಲ್ಲವೆ, ಆತನ ಕೋರಿಕೆಯನ್ನು ಈಡೇರಿಸಬೇಕಾದ್ದು ತನ್ನ ಕರ್ತವ್ಯವೆಂದು ಬಗೆದು, ಸಮ್ಮತಿ ನೀಡಿರುತ್ತಾಳೆ.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.