MENU

ದಾದಾಗಿರಿಯ ದಿನಗಳು

ಒಳಗೂ ಬಯಲು ಹೊರಗೂ ಬಯಲು

July 2, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಸಿಸಿಫಸ್ ಮತ್ತು ಸಾವು – 2

ನಟೋಸ್‍ನನ್ನು ಬಂಧನದಿಂದ ಬಿಡಿಸಿಕೊಂಡು, ಸಿಸಿಫಸ್‍ನನ್ನು ಅಧೋಲೋಕಕ್ಕೆ ಎಳೆದುಕೊಂಡು ಹೋಗುತ್ತಾನೆ ಮರ್‍ಕ್ಯುರಿ. ಅಲ್ಲಿ ಎಲ್ಲ ದೇವತೆಗಳೂ ಸಿಸಿಫಸ್‍ನಿಗೆ ಧರ್ಮದೇಟುಗಳನ್ನು ಬಾರಿಸಿ, ಅವನಿಗೇನು ಶಿಕ್ಷೆ ವಿಧಿಸಬೇಕೆಂದು ಸಮಾಲೋಚಿಸುತ್ತಿರುವಾಗ ಸಿಸಿಫಸ್ ಒಂದು ವಿನಂತಿಯನ್ನು ಮಾಡಿಕೊಳ್ಳುತ್ತಾನೆ: ‘…ದೇವಾನುದೇವತೆಗಳೆ… ನಾನು ಶಿಕ್ಷೆಗೆ ಅರ್ಹ… ನೀವು ವಿಧಿಸುವ ಯಾವ ಶಿಕ್ಷೆಗೂ ನಾನು ಬದ್ಧ… ಆದರೆ ನನ್ನ ಪತ್ನಿ ಒಂದು ಘೋರ ಅಪರಾಧ ಎಸಗಿದ್ದಾಳೆ… ನನಗಲ್ಲ, ನಿಮಗೆ… ನನ್ನ ಶವವನ್ನು ಧರ್ಮಬದ್ಧವಾಗಿ ಹೂಳದೆ… ನನ್ನ ಜೀವವನ್ನು ಕೊಂಡೊಯ್ಯುತ್ತಿರುವ ಸಾವಿನ ಭಟರಿಗೆ ನೀಡಲು, ನನ್ನ ಕಣ್ಣುಗಳ ಮೇಲೆ ಯಾವುದೆ ನಾಣ್ಯಗಳನ್ನೂ ಇಡದೆ… ನಡುಬೀದಿಯಲ್ಲಿ ಎಸೆದಿದ್ದಾಳೆ… ಅವಳಿಗೆ ಬುದ್ಧಿ ಕಲಿಸಿ ಬರುತ್ತೇನೆ… ಈ ಬಾರಿ ನೀವು ಹೆಚ್ಚು ಪ್ರಯಾಸ ತೆಗೆದುಕೊಳ್ಳುವ ಅಗತ್ಯವಿಲ್ಲ… ನನ್ನ ಪತ್ನಿಗೆ ದಂಡಿಸಿದ ನಂತರ ನೀವು ಎಂದು ಬರಹೇಳಿದರೂ ಬರುತ್ತೇನೆ…’ ಎಂದು ಅಂಗಲಾಚುತ್ತಾನೆ. ಆ ಅಧೋಲೋಕದ ಅಧಿಪತಿ ಪ್ಲೂಟೊ ಎನ್ನುವ ದೇವ. ಆಗ ಅಲ್ಲಿದ್ದ ಹೆಣ್ಣು ದೇವತೆಯೊಬ್ಬಳು ಸಿಸಿಫಸ್‍ನ ಪತ್ನಿ ಎಸಗಿದ್ದು ಘೋರ ಅಪರಾಧವೆಂದು ಹೇಳಿ, ಅವಳಿಗೆ ಬುದ್ಧಿ ಕಲಿಸಿ ಬರಲು ಸಿಸಿಫಸ್‍ನಿಗೆ ಅನುಮತಿ ನೀಡುವುದು ಸೂಕ್ತವೆನ್ನುತ್ತಾಳೆ. ಬಹುಶಃ ಸಿಸಿಫಸ್ ತಾನು ಎಸಗಿದ ತಪ್ಪು ತನಗಿಂತಲೂ ಹೆಚ್ಚು ಸಾವಿನ ನೀತಿ ನಿಯಮಗಳನ್ನು ರೂಪಿಸಿರುವ ದೇವತಾಗಣಕ್ಕೆ ಎಸಗಿದ್ದ ದ್ರೋಹವೆಂದು ಪ್ಲೂಟೊನ ಮನಸ್ಸನ್ನು ಒಲಿಸಿರುವ ಸಾಧ್ಯತೆಗಳೂ ಇರಬಹುದು. ಎಷ್ಟೆಂದರೂ ದೇವತೆಗಳು ಮನುಷ್ಯರಷ್ಟು ಜಾಣರುಗಳಲ್ಲವೆನ್ನುವ ತಿಳಿವಳಿಕೆ ಅವನಿಗಿದೆ! ಅವನು ಎಣಿಸಿದಂತೆ ಪ್ಲೂಟೊ ಅವನನ್ನು ಹೆಂಡತಿಗೆ ಬುದ್ಧಿ ಕಲಿಸಿ ಬರಲು ಮತ್ತೆ ಭೂಮಿಗೆ ಕಳಿಸುತ್ತಾನೆ.
ಭೂಮಿಗೆ ಬಂದ ಮೇಲೆ ಸಿಸಿಫಸ್‍ನನ್ನು ಹಿಡಿಯಲು ಸಾಧ್ಯವೆ?! ನೆಲ, ನದಿ, ಸಮುದ್ರ, ಬೆಟ್ಟಗಳು, ಬಿಸಿಲು, ಬೆಳದಿಂಗಳು, ಪತ್ನಿಯರು, ಗೆಳತಿಯರು, ಸಂಗಡಿಗರು ಮತ್ತು ಮನಸ್ಸಿಗೆ ಹಿತ ಕೊಡುವ ತಿನಿಸು, ಹಾಡುಗಳು, ನರ್ತನದಲ್ಲಿ ಮುಳುಗಿಹೋಗುತ್ತಾನೆ. ದೇವತೆಗಳು ಎಷ್ಟೆಂದು ತನ್ನ ಮೇಲೆ ಕಣ್ಣಿಟ್ಟಿರಲು ಸಾಧ್ಯ? ಇತರ ಮನುಷ್ಯರಿಲ್ಲವೆ? ಪ್ರಾಣಿ-ಪಕ್ಷಿಗಳಿಲ್ಲವೆ? ಅವರಿಗೆ ನೀಡಿದ ವಚನವನ್ನು ಮುರಿಯದೆ ಮತ್ಯಾರಿಗೆ ನೀಡಿದ ವಚನವನ್ನು ಮುರಿಯಲು ಸಾಧ್ಯ?

ಆರಾಮವಾಗಿ ನರಕ, ಸಾವು ಮತ್ತು ದೇವತೆಗಳನ್ನು ಮರೆತು ಬದುಕಿನಲ್ಲಿ ಕಳೆದುಹೋಗುತ್ತಾನೆ. ಬಹುಶಃ ಸಾಮಾನ್ಯ ಮನುಷ್ಯ ಆ ರೀತಿ ದೇವತೆಗಳನ್ನು ಯಾಮಾರಿಸಿದ್ದರೆ ಅವರು ಅಷ್ಟು ತಲೆಬಿಸಿ ಮಾಡಿಕೊಳ್ಳುತ್ತಿರಲಿಲ್ಲವೇನೊ. ಆದರೆ ಸಿಸಿಫಸ್? ಸಾವನ್ನು ಬಂಧಿಸಿದ್ದ ಅವನು ಇತರ ಯಾವ ಮನುಷ್ಯರೂ ಎಸಗದ ಪ್ರಮಾದವನ್ನು ಎಸಗಿದವನು. ಹಾಗಾಗಿ ಒಂದಷ್ಟು ವರ್ಷ ಕಳೆಯುವಷ್ಟರಲ್ಲಿ ಅವನು ಅಧೋಲೋಕಕ್ಕೆ ಹಿಂದಿರುಗದಿರುವುದು ಅವರ ಗಮನಕ್ಕೆ ಬರುತ್ತದೆ. ಹಾಗೆಂದು ದೇವತೆಗಳು ಕ್ರೂರಿಗಳಲ್ಲ. ವ್ಯವಸ್ಥೆಯನ್ನು ಸಮರ್ಪಕವಾಗಿಡಲು ಅವರು ಹುಟ್ಟು-ಸಾವುಗಳ ನಿಯಮಗಳನ್ನು ರೂಪಿಸಿದ್ದಾರೆಯೆ ಹೊರತು ಮನುಷ್ಯರನ್ನು ಹಿಂಸಿಸುವುದರಲ್ಲಿ ಅವರಿಗೆ ಯಾವ ಆನಂದವೂ ಇಲ್ಲ. ಹಾಗಾಗಿ ತಮ್ಮದೇ ಆದ ರೀತಿಯಲ್ಲಿ ಸಿಸಿಫಸ್ಸನಿಗೆ ಅಧೋಲೋಕಕ್ಕೆ ಬಂದು ಶರಣಾಗಬೇಕೆಂದು ಸಂದೇಶವನ್ನು ಕಳಿಸುತ್ತಾರೆ. ಆದರೆ ಸಿಸಿಫಸ್ ಅದಕ್ಕೆ ಮಹತ್ವವನ್ನು ನೀಡುವುದಾದರೂ ಸಾಧ್ಯವೆ?! ತನಗೆ ಬದುಕು ನೀಡುವ ಬೆಚ್ಚನೆಯ ಸುಖದಿಂದ ಹೊರಬರಲು ಮನಸ್ಸಿಲ್ಲವೆಂದುಬಿಡುತ್ತಾನೆ. ಅವನಾಗಿಯೆ ಬರದಿದ್ದರೆ ತಾವು ಅವನನ್ನು ಮತ್ತೆ ಬಲವಂತವಾಗಿ ಎಳೆದು ತರಬೇಕಾಗುತ್ತದೆಂದು ದೇವತೆಗಳು ಎಚ್ಚರಿಕೆ ನೀಡುತ್ತಾರೆ. ಬದುಕಿನ ಉತ್ಕಟತೆಯಲ್ಲಿ ಮುಳುಗಿರುವ ಮನುಷ್ಯನಿಗೆ ದೇವತೆಗಳ ಎಚ್ಚರಿಕೆ ಯಾವ ಲೆಕ್ಕ?! ತಾನು ಯಾವುದೆ ಕಾರಣಕ್ಕೂ ಬರುವುದಿಲ್ಲವೆಂದು ದೇವತಾಲೋಕದ ದೂತರಿಗೆ ಕೈ ಆಡಿಸಿಬಿಡುತ್ತಾನೆ. ಅವನು ಮಾತಿಗೆ ಮಣಿಯುವ ಆಸಾಮಿಯಲ್ಲವೆಂದು ದೇವತೆಗಳು ಬಲಿಷ್ಠ ದೇವನೊಬ್ಬನನ್ನು ಕಳಿಸಿ ಸಿಸಿಫಸ್ಸನನ್ನು ಪಾತಾಳದ ಲೋಕಕ್ಕೆ ಎಳೆದುತರುತ್ತಾರೆ.


ದೇವತೆಗಳನ್ನು ಅಷ್ಟೆಲ್ಲಾ ತಾತ್ಸಾರದಿಂದ ನಡೆಸಿಕೊಂಡ ಅವನಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕೆನ್ನುವುದನ್ನು ಕುರಿತು ಈ ಬಾರಿಯೂ ದೇವತಾ ಸಮೂಹ ಸಾಕಷ್ಟು ಸಮಾಲೋಚಿಸುತ್ತದೆ. ಆದರೆ ಸಿಸಿಫಸ್ಸನಿಗೆ ಒಂದು ಸಂಗತಿ ಸ್ಪಷ್ಟವಾಗಿ ತಿಳಿದಿರುತ್ತದೆ; ದೇವತೆಗಳು ಎಷ್ಟೆ ಕಠಿಣವಾದ ಶಿಕ್ಷೆಯನ್ನು ನೀಡಿದರೂ, ಆ ಶಿಕ್ಷೆಯನ್ನು ತಾನು ಪೂರೈಸಿದ ನಂತರ, ತನಗೆ ಬಿಡುಗಡೆ ಸಿಕ್ಕೇ ಸಿಗುತ್ತದೆ ಮತ್ತು ತಾನು ಭೂಮಿಗೆ, ತನ್ನ ಸಹಜ ಬದುಕಿಗೆ ತೆರಳಬಹುದು. ತಾನು ಅನುಭವಿಸಿರುವ ಸುಖಕ್ಕೆ ಮತ್ತು ಶಿಕ್ಷೆಯ ಅವಧಿ ಮುಗಿದ ನಂತರ ಅನುಭವಿಸುವ ಸುಖಕ್ಕೆ ಹೋಲಿಸಿದರೆ ಯಾವ ಶಿಕ್ಷೆಯೂ ಭೀಕರವಲ್ಲ ಎಂದು ತೀರ್ಮಾನಿಸುತ್ತಾನೆ.
ಅಂತಿಮವಾಗಿ ದೇವತೆಗಳು ಶಿಕ್ಷೆಯನ್ನು ಪ್ರಕಟಿಸುತ್ತಾರೆ: ಒಂದು ಬೆಟ್ಟ; ಅದರ ಬುಡದಲ್ಲಿ ಒಂದು ಬಂಡೆ; ಆ ಬಂಡೆಯನ್ನು ತಳ್ಳಿಕೊಂಡು ಹೋಗಿ ಬೆಟ್ಟದ ತುದಿಗೆ ತಲುಪಿಸಿದಾಗ ಅವನಿಗೆ ಬಿಡುಗಡೆ. ಸಿಸಿಫಸ್ ಬೆಟ್ಟ ಮತ್ತು ಬಂಡೆಗಳನ್ನು ನೋಡುತ್ತಾನೆ. ದೈಹಿಕವಾಗಿ ಸಾಕಷ್ಟು ಸಮರ್ಥನಾಗಿರುವ ತಾನು ಒಂದು ದಿನದಲ್ಲೆ ಆ ಬಂಡೆಯನ್ನು ತುದಿಗೆ ತಲುಪಿಸಬಹುದೆನ್ನುವ ಭರವಸೆ ಉಂಟಾಗಿ, ‘… ಅದನ್ನು ತುದಿಗೆ ತಲುಪಿಸಿದ ನಂತರ ಖಂಡಿತವಾಗಿಯೂ ನನಗೆ ಬಿಡುಗಡೆಯೊ…?’ ಎಂದು ಪ್ರಶ್ನಿಸುತ್ತಾನೆ. ದೇವತೆಗಳು ಹೌದೆಂದು ಉತ್ತರಿಸಿದಾಗ ಅವರ ದಡ್ಡತನಕ್ಕೆ, ಅವಿವೇಕತನಕ್ಕೆ ಮನಸ್ಸಿನಲ್ಲೆ ನಗು ಉಕ್ಕಿದರೂ ತಡೆದುಕೊಂಡು ಆ ಕ್ಷಣದಿಂದಲೆ ಬಂಡೆಯನ್ನು ಮೇಲಕ್ಕೆ ದೂಡಿಕೊಂಡು ಹೋಗತೊಡಗುತ್ತಾನೆ. ಒಂದಷ್ಟು ಹೊತ್ತು ಕಳೆಯುವಷ್ಟರಲ್ಲಿ ತುತ್ತತುದಿಯ ಸಮೀಪ ತಲುಪಿಬಿಡುತ್ತಾನೆ. ಆತ ಈ ಬಾರಿ ಮತ್ತೆ ಭೂಮಿಗೆ ಹೋದಾಗ ಏನೆಲ್ಲಾ ಖುಷಿಯನ್ನು ಅನುಭವಿಸಬೇಕು ಎಂದು ಮನಸ್ಸಿನಲ್ಲೆ ನಕ್ಷೆ ಹಾಕಿಕೊಳ್ಳುತ್ತಾ ಇನ್ನೊಂದು ಹೆಜ್ಜೆಯಲ್ಲಿ ತುತ್ತತುದಿಗೆ ಬಂಡೆಯನ್ನು ತಲುಪಿಸಲು ಹೋದಾಗ ಅದು ಅವನ ಕೈ ಜಾರಿ, ಬೆಟ್ಟದ ಕೆಳಕ್ಕೆ ಹಿಂದೆ ಯಾವ ಸ್ಥಾನದಲ್ಲಿತ್ತೊ ಅಲ್ಲಿಗೆ ಉರುಳಿಬಿಡುತ್ತದೆ.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.