MENU

ಒಳಗೂ ಬಯಲು ಹೊರಗೂ ಬಯಲು

ಅಗ್ನಿ ಮಿನಿಟ್

July 4, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಸಿಸಿಫಸ್ಸನ ‘ಸ್ಥಿತಿ’

ಸಿಸಿಫಸ್‍ಗೆ ಮೊದಲ ಬಾರಿ ಬೆಟ್ಟದ ತುದಿಯಿಂದ ಬಂಡೆ ಜಾರಿ ಕೆಳಕ್ಕೆ ಬಿದ್ದಾಗ ಸಂಕಟ ಉಂಟಾದರೂ, ಎರಡನೆ ಪ್ರಯತ್ನದಲ್ಲಿ ಖಚಿತವಾಗಿಯೂ ಜಯಶಾಲಿಯಾಗುತ್ತೇನೆನ್ನುವ ಭರವಸೆಯಿಂದ ಕೆಳಕ್ಕಿಳಿದು ಬಂದ. ಆದರೆ ಎರಡನೆಯ ಬಾರಿಗೂ ಅದು ತುದಿಯ ಹತ್ತಿರದವರೆಗೂ ಸರಾಗವಾಗಿ ಹೋಗಿ, ಅಲ್ಲಿಂದ ಮತ್ತೆ ಉರುಳಿ ಬಿದ್ದಾಗ, ದೇವತೆಗಳು ತನ್ನ ವಿರುದ್ಧ ಏನೊ ಕರಾಮತ್ತು ಮಾಡಿರಬೇಕೆನ್ನಿಸಿತು. ಹಾಗೆಂದು ಸುಮ್ಮನಿರಲು ಸಾಧ್ಯವಿಲ್ಲ, ಅಲ್ಲವೆ? ಆ ಅಧೋಲೋಕದಿಂದ ಹೊರಬರಬೇಕಾದರೆ ಅದನ್ನು ತುದಿಗೆ ತಲುಪಿಸಿಯೆ ತೀರಬೇಕು. ಮತ್ತೆ ಕಾರ್ಯಪ್ರವೃತ್ತನಾದ. ಆದರೆ ಮತ್ತೆಯೂ ಬಂಡೆ ಕೆಳಕ್ಕೆ ಜಾರಿತು.


ಸಿಸಿಫಸ್ಸನ ಪ್ರಸಂಗ ಯಾವಾಗ ಆರಂಭವಾಯಿತೊ ಯಾರಿಗೂ ತಿಳಿದಿಲ್ಲ. ಆದರೆ ಆತನ ಪ್ರಸಂಗ ಈ ಕ್ಷಣದವರೆಗೂ ಅಂತಿಮವಾಗಿಲ್ಲ. ಕಾರಣ, ಈಗಲೂ ಸಿಸಿಫಸ್ ಬಂಡೆಯನ್ನು ಬೆಟ್ಟದ ತುದಿಗೆ ತಲುಪಿಸುವ ಕಾಯಕದಲ್ಲೆ ನಿರತನಾಗಿದ್ದಾನೆ! ಅಂದರೆ, ಅವನಿಗೆ ಆ ಶಿಕ್ಷೆಯಿಂದ ಬಿಡುಗಡೆ ಇಲ್ಲ.
ಈ ಪ್ರಸಂಗವನ್ನು ಮತ್ತೊಂದು ನೆಲೆಯಿಂದಲೂ ಅರಿಯುವ ಪ್ರಯತ್ನ ಮಾಡಬಹುದು.
ಸಿಸಿಫಸ್ ದೇವತೆಗಳಿಗೆ ಪ್ರಿಯನಾದವನಾಗಿದ್ದುದರಿಂದಲೆ ದೇವತೆಗಳು ಅವನನ್ನು ಪತ್ನಿಗೆ ಬುದ್ಧಿ ಕಲಿಸಿ ಬರಲು ಹಿಂದಕ್ಕೆ ಕಳಿಸಿದರು. ಮನುಷ್ಯರಿಗೆ ಬುದ್ಧಿ ಕಲಿಸುವ ಕೆಲಸ ಒಂದೆರಡು ದಿನಗಳಲ್ಲಿ ಆಗುತ್ತದೆಯೆ? ಹಾಗಾಗಿ ಸಿಸಿಫಸ್ ತನಗೆ ಸಾಕಷ್ಟು ಕಾಲಾವಕಾಶ ನೀಡಬೇಕೆಂದು ದೇವತೆಗಳಿಗೆ ಗೋಗರೆದಿರುವ ಸಾಧ್ಯತೆಗಳಿದ್ದೆ ಇರುತ್ತವೆ. ಆತನ ಬಗ್ಗೆ ಕರುಣೆ ಹೊಂದಿದ ಯಾವುದೊ ಮಾತೃಹೃದಯದ ದೇವತೆ, ‘…ನೀನು ನಿನ್ನ ಪತ್ನಿಗೆ ಬುದ್ಧಿ ಕಲಿಸಿದ ನಂತರ, ನಿನ್ನ ಕೋಟೆಯ ಪಕ್ಕದಲ್ಲಿರುವ ಬೆಟ್ಟದ ತುದಿಗೆ ಅದರ ಬುಡದಲ್ಲಿರುವ ಒಂದು ಬಂಡೆಯನ್ನು ತಲುಪಿಸು. ಅದು ನೀನು ಮತ್ತೆ ಸಾವಿಗೆ ಶರಣಾಗಲು ಸಿದ್ಧವಿದ್ದೀಯ ಎನ್ನುವ ಸಂದೇಶವನ್ನು ರವಾನಿಸುತ್ತದೆ. ಆಗ ಸಾವು ನಿನ್ನನ್ನು ಕರೆದುಕೊಂಡು ಬರುತ್ತದೆ…’ ಎನ್ನುತ್ತಾಳೆ.
ಸಿಸಿಫಸ್ ಅವರಿಗೆ ವಂದಿಸಿ ಭೂಲೋಕಕ್ಕೆ ಮರಳುತ್ತಾನೆ. ಪತ್ನಿಯ ಜೊತೆ ದೇವತೆಗಳನ್ನು ಕುರಿತು ತಮಾಷೆ ಮಾಡುತ್ತಾನೆ. ತಾನೆ ಪತ್ನಿಯ ಮೂಲಕ ರೂಪಿಸಿದ ತಂತ್ರಕ್ಕೆ ದೇವತೆಗಳು ಮಣಿಯುವುದರ ಜೊತೆಗೆ ತನಗೆ ಸಮ್ಮತವೆನಿಸಿದಾಗ ಸಾಯುವ ಅವಕಾಶವನ್ನು ನೀಡಿರುವ ಅವರ ದಡ್ಡತನಕ್ಕೆ ನಗಾಡುತ್ತಾನೆ.
ಸಿಸಿಫಸ್ ಇರಲಿ, ಯಾವುದೆ ಮನುಷ್ಯನಿಗೂ ಬದುಕಿನ ಬಗ್ಗೆ ಸಾಯಬೇಕೆನಿಸುವಷ್ಟು ಜಿಗುಪ್ಸೆ ಮೂಡಲು ಸಾಧ್ಯವೆ? ಅದರಲ್ಲೂ ತಾನು ರಾಜ. ಅಚಂದ್ರಾರ್ಕವಾಗಿ ಆಳುತ್ತಿರಬಹುದು. ಪ್ರಿಯ ಪತ್ನಿಯ ಜೊತೆಗೆ ಸಾಕೆನಿಸುವಷ್ಟು ಹೆಂಗಳೆಯರು, ಬಯಸಿದ ತಿನಿಸು. ಖುಷಿ ನೀಡುವ ನೋಟಗಳು, ಬೆಚ್ಚನೆಯ ವಾತಾವರಣ. ಹೃದಯಕ್ಕೆ ತಂಪೆರೆಯುವ ನದಿಗಳು, ಕಣ್ಣು ಸೆಳೆಯುವ ಪರ್ವತಗಳು.
ತಾನು ಎಂದಿಗೂ ಈ ಬದುಕಿನಿಂದ ಬಿಡುಗಡೆ ಪಡೆಯುವ ಯೋಚನೆಯನ್ನೂ ಮಾಡಲಾರೆನೆನ್ನಿಸಿತು.
ಆದರೆ ದಶಕ, ಶತಮಾನಗಳಿರಲಿ, ಹಲವು ದಿನಗಳು ಕಳೆಯುವಷ್ಟರಲ್ಲೆ ದೇಹ ನೀಡುವ ಎಲ್ಲ ಬಗೆಯ ಸುಖಗಳೂ ಅರ್ಥಹೀನವೆನ್ನಿಸತೊಡಗಿತು. ಕಾಣದ ಸಾವು ತನ್ನನ್ನು ಹೊಂಚು ಹಾಕುತ್ತಿರುವಾಗ ಆದಷ್ಟೂ ಹೆಚ್ಚು ಬಯಕೆಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪೂರೈಸಿಕೊಳ್ಳಲು ಅವನು ಹಾತೊರೆಯುತ್ತಿದ್ದ. ಆದರೆ ಸಾವಿನ ಮೇಲೆ ಹಿಡಿತ ಸಿಕ್ಕಿರುವುದರಿಂದ, ಅಂದರೆ ಸಾವೆ ಇಲ್ಲದಂತಹ ಸಾಧ್ಯತೆಗೂ ತಾನು ತೆರೆದುಕೊಂಡಿರುವುದರಿಂದ, ಸಾವಿರ-ಲಕ್ಷ ವರ್ಷ ಕಳೆದರೂ ಅವೇ ಬಯಕೆಗಳಿಂದ ತೃಪ್ತಿ ಪಡಬೇಕಿರುವುದರಿಂದ, ಅವನಲ್ಲಿ ಒಂದು ರೀತಿಯ ಖಿನ್ನತೆ ಮಡುಗಟ್ಟತೊಡಗಿತು. ಬಿಡುಗಡೆಗಾಗಿ ಮನಸ್ಸು ಕಾತರಿಸತೊಡಗಿತು. ಆದಷ್ಟೂ ಬೇಗ ಸಾಯಲು ನಿರ್ಧರಿಸಿ, ಬಂಡೆಯನ್ನು ಬೆಟ್ಟದ ತುದಿಗೆ ತೆಗೆದುಕೊಂಡು ಹೋದರೆ ಅದು ತುದಿ ತಲುಪುತ್ತಲೇ ಇಲ್ಲ! ಅಂದರೆ ಈ ಕ್ಷಣದವರೆಗೂ ಸಿಸಿಫಸ್ ತಾನಿರುವ ‘ಸ್ಥಿತಿ’ಯಿಂದ ಕಳಚಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದರೂ, ಅದರಲ್ಲಿ ಸಫಲನಾಗಿಲ್ಲ.
ಅಧೋಲೋಕದಲ್ಲಿರಲಿ, ಭೂಲೋಕದಲ್ಲಿರಲಿ ಅಥವಾ ಸ್ವರ್ಗದಲ್ಲಿರಲಿ ಮನಸ್ಸು ಶಾಶ್ವತವಾಗಿ ಮಡುಗಟ್ಟುವುದನ್ನು ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ. ಹರಿಯುವ ನದಿ, ಬೀಸುವ ಗಾಳಿ, ಮೃದು-ಗಡಸುಗಳ ಮಣ್ಣಿನ ಮಿಶ್ರಣದ ಎರಕವಾಗಿರುವ ಮನಸ್ಸಿಗೆ ಸಾವು ಒಂದು ಸವಾಲು. ಆಕರ್ಷಣೀಯ ಸವಾಲು. ಆ ಸವಾಲೆ ಇಲ್ಲದ ಸ್ಥಿತಿಯಲ್ಲಿ ಮನುಷ್ಯನ ಕೈಕಾಲುಗಳು ಆಡುವುದಿಲ್ಲ; ಸ್ಥಗಿತವಾಗುತ್ತವೆ.
***
Myth of Sisyphus ಎನ್ನುವ ಆಲ್ಬರ್ಟ್ ಕಮೂವಿನ ಒಂದು ಪ್ರಬಂಧ ಕಳೆದ ಶತಮಾನದ ಮಧ್ಯಭಾಗದಿಂದ ಈ ಗಳಿಗೆಯವರೆಗೂ ಸಾಹಿತ್ಯಾಸಕ್ತರನ್ನು ಜಗತ್ತಿನೆಲ್ಲೆಡೆ ಸೆಳೆಯುತ್ತಿದೆ.
ಆಧುನಿಕ ಮನುಷ್ಯನ ಸ್ಥಿತಿಯನ್ನು ಸಿಸಿಫಸ್ಸನೊಡನೆ ಸಮೀಕರಿಸುತ್ತಾನೆ ಕಮೂ.
ಜನಸಮೂಹದ ಕಡೆ ಒಂದು ಬಾರಿ ಗಂಭೀರವಾಗಿ ಕಣ್ಣಾಡಿಸಿ. ಎಲ್ಲರೂ ಏಕತಾನತೆಯ ಜಗತ್ತಿನಲ್ಲಿದ್ದಾರೆ. ಕಾರ್ಮಿಕ ಕಾರ್ಮಿಕನಾಗಿರುತ್ತಾನೆ; ರೈತ ರೈತಾಪಿ ಕೆಲಸ ಮಾಡುತ್ತಿದ್ದಾನೆ; ಸೈನಿಕ ರಕ್ಷಣೆ ನೀಡುತ್ತಿದ್ದಾನೆ; ರಾಜಕಾರಣಿ ರಾಜಕೀಯ ಮಾಡುತ್ತಿದ್ದಾನೆ; ಡ್ರೈವರ್‍ಗಳು ಗಾಡಿಗಳನ್ನು ಓಡಿಸುತ್ತಿದ್ದಾರೆ; ಅಧ್ಯಾಪಕರುಗಳು ಪಾಠ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ. ರಾತ್ರಿ ಅದೇ ಪತ್ನಿ. ಅದೇ ಕುಟುಂಬ. ಅದೇ ಗೋಡೆಗಳು. ಅದೇ ಹಾಸಿಗೆ. ಅವೇ ಪದಗಳು. ಅವೇ ಧ್ವನಿ. ಎಲ್ಲ ಅಂಗಗಳೂ ಅವುಗಳ ಕೆಲಸವನ್ನು ಅವೇ ಮಾಡುತ್ತಿರುತ್ತವೆ. ಕಿವಿ ನೋಡುವುದಿಲ್ಲ, ಕೇಳಿಸಿಕೊಳ್ಳುತ್ತದೆ. ಕಣ್ಣು ಮಾತನಾಡುವುದಿಲ್ಲ, ನೋಡುತ್ತದೆ. ಮೂಗು ವಾಸನೆ ಹೀರುತ್ತದೆ, ತಿನ್ನುವುದಿಲ್ಲ. ಪಾದ ನಡೆಯುತ್ತದೆ, ಪ್ರೇಮ ಮಾಡುವುದಿಲ್ಲ.
ಆಳವಾಗಿ ಯೋಚಿಸುವ ಮನುಷ್ಯನಿಗೆ ಇಡೀ ಬದುಕೆ ಅಸಂಗತವೆನಿಸಿಬಿಡುತ್ತದೆ. ಸಂಬಂಧಗಳು ಅಸಂಬದ್ಧವೆನಿಸುತ್ತವೆ.
ಈ ‘ಸ್ಥಿತಿ’ಯಿಂದ ಬಿಡುಗಡೆಯೆ ಇರದೆ ಹೋದಾಗ?
ಇತ್ತೀಚಿನ ದಿನಗಳಲ್ಲಿ ಅಂತಹ ‘ಸ್ಥಿತಿ’ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜೈವಿಕ ವಿಜ್ಞಾನ ಈ ಶತಮಾನದ ಕಡೆಯ ಹೊತ್ತಿಗೆ ಮನುಷ್ಯನಿಗೆ ಸಾವೆ ಇಲ್ಲದಿರುವಂತಹ ದಾರಿಯನ್ನು ತೆರೆಯಬಹುದೆನ್ನುವ ಸಾಧ್ಯತೆ ದಟ್ಟವಾಗಿ ಹರಡತೊಡಗಿದೆ. ಇನ್ನು ಇಪ್ಪತ್ತು ವರ್ಷಗಳಲ್ಲಿ ಮನುಷ್ಯ ಇನ್ನೂರು ವರ್ಷ ಜೀವಿಸುವ ಸಾಮಥ್ರ್ಯ ಗಳಿಸಿ, ಐವತ್ತು ವರ್ಷ ಕಳೆಯುವಷ್ಟರಲ್ಲಿ ಎಂಟುನೂರು ವರ್ಷ ತಲುಪಿ, ಮುಂದಿನ ಶತಮಾನದ ಆರಂಭದ ಹೊತ್ತಿಗೆ ಹತ್ತು ಸಾವಿರ ವರ್ಷಗಳ ಕಾಲ ಬದುಕುವ ‘ಬುದ್ಧಿವಂತಿಕೆ’ಯನ್ನು ಬೆಳೆಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವ ಹಾಗಿಲ್ಲ.
ಈ ಸಂಗತಿಯ ಬಗ್ಗೆ ಎಲ್ಲ ಭಾಷೆಯ ಒಂದಷ್ಟು ಸಾಹಿತಿಗಳು ಪ್ರತಿಕ್ರಿಯಿಸಿರುವುದು; ‘… ಅಂತಹ ಸನ್ನಿವೇಶದಲ್ಲಿ ಜಗತ್ತು-ಮನುಷ್ಯ ಜನಾಂಗ ಇನ್ನಿಲ್ಲದ ಒತ್ತಡಕ್ಕೆ ಸಿಲುಕುತ್ತದೆ… ಜನಸಂಖ್ಯೆ ಪ್ರಮಾಣ ಮಿತಿಮೀರಿ ಬದುಕೆ ಒಂದು ಶಾಪವೆನಿಸುತ್ತದೆ… ಅಂತಹ ಸ್ಥಿತಿ ತಲುಪಿದಾಗ ಮನುಷ್ಯ ಹೆಚ್ಚೆಂದರೆ ಐದು ಸಾವಿರ ವರ್ಷಗಳ ಕಾಲ ಮಾತ್ರ ಜೀವಿಸುವಂತಹ ಮಿತಿಯನ್ನು ಹೇರಿಕೊಳ್ಳಬೇಕಾಗುತ್ತದೆ…’
ಈ ರೀತಿ ಪ್ರತಿಕ್ರಿಯಿಸುವವರು ನಿಜಕ್ಕೂ ‘ಬುದ್ಧಿ’ ಬೆಳೆಸಿಕೊಂಡಿರುವ ಜೀವಿಗಳಲ್ಲ. ಇಂದು ಮನುಷ್ಯನ ಆಲೋಚನಾ ಪದ್ಧತಿ, thinking system, ಆತನ ಜೀವಿತಾವಧಿಯ ಮಿತಿಯನ್ನು ಅವಲಂಬಿಸಿದೆ. ಹೆಚ್ಚೆಂದರೆ ಮನುಷ್ಯ 70-80 ವರ್ಷಗಳ ಅವಧಿಗೆ ಜೀವಿಸಿರುವ ನಂಬಿಕೆಯನ್ನು ಇಟ್ಟುಕೊಂಡಿರುತ್ತಾನೆ. ಹಾಗಾಗಿ ಅಷ್ಟು ಅವಧಿಯಲ್ಲಿ ತನ್ನ ಅಗತ್ಯಗಳ ಜೊತೆಗೆ ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಹೆಣಗುತ್ತಿರುತ್ತಾನೆ. ಆದರೆ ಅವನಿಗೆ ಸಾವೆ ಇಲ್ಲದ ಸಾಧ್ಯತೆ ತೆರೆದುಕೊಂಡರೆ? ಯಾವ ಕಾರಣಕ್ಕೂ ಇಪ್ಪತ್ತೈದಕ್ಕೆ ಮದುವೆಯಾಗಿ ಮೂವತ್ತಕ್ಕೆ ಮಕ್ಕಳು ಮಾಡಿಕೊಳ್ಳುವುದನ್ನು ಕಲ್ಪಿಸಿಕೊಳ್ಳಲೂ ಹೋಗುವುದಿಲ್ಲ. ಸಾವೆ ಇಲ್ಲದಿದ್ದರೆ ಮಕ್ಕಳ ಅಗತ್ಯವೂ ಅವನನ್ನು ತಟ್ಟಲಾರದು. ಹಾಗೆಯೆ ಶಾಶ್ವತ ಸಂಬಂಧ. ಅಥವಾ ಶಾಶ್ವತವಾಗಿ ಒಂದೇ ಸ್ಥಳದಲ್ಲಿ ನೆಲೆಸಿರುವುದು. ಒಂದೇ ಸ್ಥಳ ಇರಲಿ, ಒಂದೇ ಗ್ರಹ ಸಹ ಅವನಿಗೆ ನೆಮ್ಮದಿ ನೀಡಲಾರದು.
ಅಂತಹ ಸಾವಿಲ್ಲದ ಮನುಷ್ಯನ ಮಾನಸಿಕ ರಚನೆಯನ್ನು ನಾವು ಈ ಹಂತದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವೆ ಇಲ್ಲ.
ಆದರೆ ಬಿಡುಗಡೆಯೆ ಇಲ್ಲದ ಬದುಕಿಗೆ ಜೋತುಕೊಂಡಾಗಲೂ ಮನುಷ್ಯ ಖಿನ್ನನಾಗದೆ, ದುಃಖಿತನಾಗದೆ, ‘ನಾನು ಸಂತೋಷವಾಗಿದ್ದೇನೆ’ ಎಂದು ನಂಬಿ ಬದುಕು ಸಾಗಿಸುತ್ತಾನೆನ್ನುತ್ತಾನೆ ಕಮೂ.
ಸಿಸಿಫಸ್ ಬಂಡೆ ಬೆಟ್ಟದ ತುದಿ ತಲುಪಿದಾಗ ಮಾತ್ರ ಬಿಡುಗಡೆ. ಆದರೆ ಅವನಿಗೆ ಬಂಡೆ ಎಂದಿಗೂ ತುದಿಯನ್ನು ತಲುಪಲಾರದೆಂದು ಮನವರಿಕೆಯಾಗಿಬಿಟ್ಟಿದೆ. ಹಾಗೆಂದು ಅವನು ದುಃಖಿಸುವುದಿಲ್ಲ. ಉತ್ಸಾಹದಿಂದ ಬಂಡೆ ತಳ್ಳುವ, ಅದು ಕೆಳಕ್ಕೆ ಜಾರಿದಾಗ ಮತ್ತೆ ಕೆಳಗೆ ಇಳಿಯುವ, ಇಳಿದ ನಂತರ ಮತ್ತೆ ಅದನ್ನು ಮೇಲಕ್ಕೆ ತಳ್ಳುವ ಬದುಕಿಗೆ ಅವನು ಹೊಂದಿಕೊಂಡುಬಿಟ್ಟಿರುತ್ತಾನೆ.
ಸಾವಿಲ್ಲದ ಬದುಕಿರಲಿ, ಜೀವಿಸುವ ಸ್ವಲ್ಪ ಕಾಲದ ಅವಧಿಯಲ್ಲೆ ನಾವು ಬದುಕನ್ನು ಎಷ್ಟು ಬಾರಿ ಅರ್ಥಹೀನವೆಂದು ಪರಿಗಣಿಸಿಲ್ಲ? ಅದಕ್ಕೆ ಕಾರಣ ನಾವು ಈ ಕ್ಷಣದ ಬದುಕನ್ನು ಮಾತ್ರವೆ ಸಮಗ್ರ ಬದುಕೆಂದು ನಂಬಿರುವುದು.
ಆ ನಂಬಿಕೆ ಪೊಳ್ಳೆಂದು ನಮಗೆ ತೋರಿಸಿಕೊಟ್ಟಿದ್ದಾರೆ ಆಧ್ಯಾತ್ಮಿಕ ಸಾಧಕರು.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.